ದೇಶದಾದ್ಯಂತ ಉಷ್ಣಾಂಶ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜನರು ಫ್ಯಾನ್, ಕೂಲರ್ ಹಾಗೂ ಎಸಿಗಳ ಬಳಕೆಯನ್ನು ಹೆಚ್ಚಿಸಿದ್ದಾರೆ.
ಆದರೆ ಎಸಿಯನ್ನು ಪದೇ ಪದೇ ಆನ್ ಮತ್ತು ಆಫ್ ಮಾಡುವ ಅಭ್ಯಾಸದಿಂದ ವಿದ್ಯುತ್ ಬಿಲ್ ಮಾತ್ರವಲ್ಲ, ಯಂತ್ರದ ಕಾರ್ಯಕ್ಷಮತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬಹುತೇಕರು ಕೊಠಡಿ ತಣ್ಣಗಾದ ತಕ್ಷಣ ಎಸಿ ಆಫ್ ಮಾಡಿ, ಮತ್ತೆ ಬಿಸಿಯಾಗುತ್ತಿದ್ದಂತೆ ಆನ್ ಮಾಡುತ್ತಾರೆ. ಆದರೆ ಈ ಕ್ರಮದಿಂದ ವಿದ್ಯುತ್ ಉಳಿತಾಯವಾಗುವುದಿಲ್ಲ. ಪ್ರತೀ ಬಾರಿ ಎಸಿ ಮತ್ತೆ ಪ್ರಾರಂಭವಾದಾಗ ಕೊಠಡಿಯನ್ನು ತಣ್ಣಗಾಗಿಸಲು ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಸಬೇಕಾಗುತ್ತದೆ. ಇದರಿಂದ ತಿಂಗಳ ವಿದ್ಯುತ್ ಬಿಲ್ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ತಜ್ಞರ ಪ್ರಕಾರ, ಎಸಿಯ ಪ್ರಮುಖ ಭಾಗವಾದ ಕಂಪ್ರೆಸರ್ ಮೇಲೆ ಪದೇ ಪದೇ ಆನ್-ಆಫ್ ಮಾಡುವುದರಿಂದ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದರಿಂದ ಯಂತ್ರ ಹೆಚ್ಚು ಬಿಸಿಯಾಗುವ ಸಾಧ್ಯತೆ ಇದ್ದು, ಕಂಪ್ರೆಸರ್‌ನ ಆಯುಷ್ಯ ಕೂಡ ಕಡಿಮೆಯಾಗಬಹುದು.
ಇದೇ ವೇಳೆ, ಎಸಿಯ ಒಳಗಿನ ವಿದ್ಯುತ್ ಘಟಕಗಳು, ವೈರಿಂಗ್ ಮತ್ತು ಕೆಪಾಸಿಟರ್‌ಗಳ ಮೇಲೂ ಪರಿಣಾಮ ಬೀಳಬಹುದು. ಕೆಲ ಸಂದರ್ಭಗಳಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಅಪಾಯವೂ ಇರುತ್ತದೆ ಎಂದು ಎಚ್ಚರಿಸಲಾಗಿದೆ.
ಪದೇ ಪದೇ ಎಸಿ ಆಫ್ ಮಾಡಿದರೆ ಕೊಠಡಿಯ ತಾಪಮಾನ ಸ್ಥಿರವಾಗುವುದಿಲ್ಲ. ಗೋಡೆಗಳು ಹಾಗೂ ಪೀಠೋಪಕರಣಗಳು ಸಂಪೂರ್ಣ ತಣ್ಣಗಾಗಲು ಸಮಯ ಬೇಕಾಗುವುದರಿಂದ ನಿರಂತರ ತಂಪು ವಾತಾವರಣ ದೊರೆಯುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಹೀಗಾಗಿ ಎಸಿಯನ್ನು 24ರಿಂದ 26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನಿರಂತರವಾಗಿ ಬಳಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಜೊತೆಗೆ ಸ್ಲೀಪ್ ಮೋಡ್, ಇಕೋ ಮೋಡ್ ಮತ್ತು ಟೈಮರ್ ಸೌಲಭ್ಯಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯವಾಗುತ್ತದೆ. ಎಸಿ ಕಾರ್ಯನಿರ್ವಹಿಸುವ ವೇಳೆ ಕೊಠಡಿಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಟ್ಟರೆ ತಂಪು ಹೆಚ್ಚು ಕಾಲ ಉಳಿಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.



