ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ವಿನೂತನ ಉದ್ದೇಶದಿಂದ ತಾಲೂಕಿನ ಗೋವನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಶ್ರಾವಣ ಸಿರಿ–ಸಿಹಿ ಭೋಜನ’ ಕಾರ್ಯಕ್ರಮ ಸತತ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ.
ಶಾಲೆಯ 1ರಿಂದ 8ನೇ ತರಗತಿಯ 86 ವಿದ್ಯಾರ್ಥಿಗಳಿಗೆ ಶ್ರಾವಣ ಮಾಸದುದ್ದಕ್ಕೂ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ನೀಡಲಾಗುತ್ತಿದೆ. ಜಿಲೇಬಿ, ಬೂಂದಿ, ಮೈಸೂರು ಪಾಕ್, ಪಾಯಸ, ಕೇಸರಿಬಾತ್ ಹಾಗೂ ಹೋಳಿಗೆ ಸೇರಿದಂತೆ ಪ್ರತಿದಿನ ವಿಭಿನ್ನ ಸಿಹಿ ತಿನಿಸುಗಳನ್ನು ಮಕ್ಕಳಿಗೆ ಸಿದ್ಧಪಡಿಸಿ ನೀಡುತ್ತಿರುವುದು ವಿಶೇಷವಾಗಿದೆ.
ಗ್ರಾಮಸ್ಥರು, ದಾನಿಗಳು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಎಸ್‌ಡಿಎಂಸಿ ಹಾಗೂ ಶಿಕ್ಷಕರ ಸಹಕಾರದಿಂದ ಶ್ರಾವಣ ಮಾಸದುದ್ದಕ್ಕೂ ಈ ಸಿಹಿಯೂಟ ಕಾರ್ಯಕ್ರಮ ನಡೆಯುತ್ತಿದೆ.
ಸಿಹಿ ಭೋಜನದ ಜತೆಗೆ ಪ್ರತಿಭಾ ಕಾರಂಜಿ, ಕ್ರೀಡಾಕೂಟ ಹಾಗೂ ನಲಿ–ಕಲಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ. ಈ ವಿನೂತನ ಪ್ರಯತ್ನದಿಂದ ಸರ್ಕಾರಿ ಶಾಲೆಯತ್ತ ಮಕ್ಕಳ ಸೆಳೆತ ಹೆಚ್ಚಿಸುವ ಉದ್ದೇಶವನ್ನು ಶಾಲೆ ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದೆ.
ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಶಾಲೆಯ ಈ ವಿಶೇಷ ಕಾರ್ಯಕ್ರಮವನ್ನು ಮೆಚ್ಚಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಸಮುದಾಯದ ಸಹಕಾರ ಪಡೆದು ಇಂತಹ ವಿನೂತನ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಶಿಮೀಕೇರಿ, ಅಕ್ಷರ ದಾಸೋಹ ಸಹ ನಿರ್ದೇಶಕ ಎಚ್.ಎಸ್. ರಾಮನಗೌಡ, ಪ್ರಧಾನ ಗುರು ಎಸ್.ಪಿ. ಕಟ್ಟೆನ್ನವರ ಹಾಗೂ ಶಿಕ್ಷಕ ಬಿ.ಬಿ. ಯತ್ತಿನಹಳ್ಳಿ ಸೇರಿದಂತೆ ಇತರರು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.



