HomeGadag Newsಬರಪೀಡಿತ ಘೋಷಣೆಗೆ ಆಗ್ರಹಿಸಿ ಬಿಜೆಪಿ ಮನವಿ

ಬರಪೀಡಿತ ಘೋಷಣೆಗೆ ಆಗ್ರಹಿಸಿ ಬಿಜೆಪಿ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮರ್ಪಕ ಮಳೆಯಿಲ್ಲದೆ ತಾಲೂಕಿನಾದ್ಯಂತ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಮಗ್ರ ಬರ ಸಮೀಕ್ಷೆ ನಡೆಸಿ ಲಕ್ಷ್ಮೇಶ್ವರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿ ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.

ಶಿರಹಟ್ಟಿ ಬಿಜೆಪಿ ಮಂಡಲದ ವತಿಯಿಂದ ಗ್ರೇಡ್–2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ, ಲಕ್ಷ್ಮೇಶ್ವರ ತಾಲೂಕಿನ ವಾಸ್ತವ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಯಿತು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಡಿ.ವೈ. ಹುನಗುಂದ ಮಾತನಾಡಿ, ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿದ್ದು, ನಿರೀಕ್ಷಿತ ಇಳುವರಿ ದೊರೆಯುವ ಸಾಧ್ಯತೆ ಕ್ಷೀಣಿಸಿದೆ. ಕೃಷಿ ಚಟುವಟಿಕೆಗಳಿಗೆ ರೈತರು ಮಾಡಿರುವ ಖರ್ಚು ಕೂಡ ವಾಪಸ್ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಹಾಗೂ ಬೆಳೆನಷ್ಟದಿಂದ ರೈತರಿಗೆ ಕೃಷಿ ಸಾಲ, ಬೆಳೆ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಾಲೂಕಿನ ಬರ ಪರಿಸ್ಥಿತಿಯ ಸಮಗ್ರ ಸಮೀಕ್ಷೆ ನಡೆಸಿ, ಲಕ್ಷ್ಮೇಶ್ವರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ತಾಲೂಕಿನ ಬರ ಪರಿಸ್ಥಿತಿಯ ಕುರಿತು ಸಮರ್ಪಕ ಅಧ್ಯಯನ ನಡೆಸಿ ಸರ್ಕಾರಕ್ಕೆ ಮಾಹಿತಿ ನೀಡದಿರುವುದರಿಂದ ಲಕ್ಷ್ಮೇಶ್ವರ ತಾಲೂಕು ಬರಪೀಡಿತ ಪಟ್ಟಿಯಿಂದ ಕೈತಪ್ಪಿದೆ ಎಂದು ಅವರು ಆರೋಪಿಸಿದರು.

ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಬರ ಸಂಕಷ್ಟದ ನಡುವೆಯೂ ಕೆಲವು ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲದ ಕಂತು ಹಾಗೂ ಬಾಕಿ ಮೊತ್ತ ಪಾವತಿಸುವಂತೆ ಒತ್ತಡ ಹೇರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಂಕಷ್ಟದಲ್ಲಿರುವ ರೈತರ ಮೇಲೆ ಸಾಲ ವಸೂಲಾತಿಯ ಒತ್ತಡ ಹೇರದಂತೆ ಸರ್ಕಾರ ಬ್ಯಾಂಕ್‌ಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮೋರ್ಚಾ ತಾಲೂಕು ಅಧ್ಯಕ್ಷ ಅಜ್ಜಪ್ಪ ಹೂಗಾರ ಮಾತನಾಡಿ, ಬೆಳೆನಷ್ಟದ ಕುರಿತು ಗ್ರಾಮವಾರು ಹಾಗೂ ರೈತವಾರು ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಬರ ಪರಿಹಾರ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನೀಲಪ್ಪ ಕರ್ಜಕಣ್ಣವರ, ನಿಂಗಪ್ಪ ಬನ್ನಿ, ನವೀನ ಹಿರೇಮಠ, ನಾಗಯ್ಯ ಮಠಪತಿ, ವೀರೇಶ ಸಾಸಲವಾಡ, ಅನಿಲ ಮುಳಗುಂದ ಸೇರಿದಂತೆ ಹಲವರು ಮಾತನಾಡಿದರು.

ಶಿರಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ತಾಲೂಕು ಯುವ ಘಟಕ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಎಂ.ಆರ್. ಪಾಟೀಲ, ನಗರ ಅಧ್ಯಕ್ಷ ವಿಜಯ ಕುಂಬಾರ, ಮಂಜನಗೌಡ ಕೆಂಚನಗೌಡ್ರ, ತುಕ್ಕಪ್ಪ ಪೂಜಾರ, ಪ್ರಕಾಶ ಮಾದನೂರ, ಗಿರೀಶ ಚೌರಡ್ಡಿ, ಜಗದೀಶಗೌಡ ಪಾಟೀಲ, ದುಂಡೇಶ ಕೋಟಗಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಲಕ್ಷ್ಮೇಶ್ವರ ತಾಲೂಕಿನ ವಾಸ್ತವ ಬರ ಪರಿಸ್ಥಿತಿಯ ಸಮಗ್ರ ಸಮೀಕ್ಷೆ ನಡೆಸಿ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರ ಮೇಲೆ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಸರ್ಕಾರ ಸೂಚನೆ ನೀಡಬೇಕು.

– ಡಿ.ವೈ. ಹುನಗುಂದ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img