HomeGadag Newsಸೆ.1ರಂದು ಗದಗಕ್ಕೆ ಮುಖ್ಯಮಂತ್ರಿ ಭೇಟಿ

ಸೆ.1ರಂದು ಗದಗಕ್ಕೆ ಮುಖ್ಯಮಂತ್ರಿ ಭೇಟಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಸೆಪ್ಟೆಂಬರ್ 1ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗದಗ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಮಹತ್ವದ ಅವಲೋಕನ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

ಮುಖ್ಯಮಂತ್ರಿಗಳು ಸೆ.1ರಂದು ಹುಬ್ಬಳ್ಳಿಯಿಂದ ಗದಗಕ್ಕೆ ಆಗಮಿಸಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನಾ ಸಭೆ ನಡೆಸಲಿದ್ದಾರೆ. ಬಳಿಕ ಬರಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಿದ್ದು, ನಂತರ ಲಕ್ಷ್ಮೇಶ್ವರಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ತಮ್ಮ ಇಲಾಖೆಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದೇಶನ ನೀಡಿದರು.

ಬರ ಪರಿಸ್ಥಿತಿ ಅವಲೋಕನ ಸಭೆಗೆ ಸಂಬಂಧಿಸಿದಂತೆ ಕುಡಿಯುವ ನೀರು, ಕೃಷಿ, ಬೆಳೆ ಹಾನಿ, ಬರ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಪೂರ್ಣ ಹಾಗೂ ನಿಖರ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಯಾವುದೇ ಇಲಾಖೆಯ ಮಾಹಿತಿಯಲ್ಲಿ ಲೋಪವಾಗದಂತೆ ಅಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ಸಜ್ಜಾಗಬೇಕು ಎಂದು ಸೂಚಿಸಿದರು.

ಅಲ್ಲದೆ, ಭಾರತ್ ಜೋಡೋ ಯುವ ಸಂಘಗಳು, ಪ್ರಜಾ ಸೇವೆ ಹಾಗೂ ಪ್ರತಿ ಶನಿವಾರ ನಡೆಯುವ ಜನಸ್ಪಂದನ ಸಭೆಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಂಬಂಧಿಸಿದ ಅಧಿಕಾರಿಗಳು ಸಿದ್ಧಪಡಿಸಿಕೊಂಡು ಬರಬೇಕು ಎಂದು ತಿಳಿಸಿದರು.

ಶಿಷ್ಟಾಚಾರ, ಸಂಚಾರ ವ್ಯವಸ್ಥೆಗೆ ಆದ್ಯತೆ

ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಖ್ಯಮಂತ್ರಿಗಳು ಗದಗ ಜಿಲ್ಲೆಯ ಪ್ರವಾಸ ಪೂರ್ಣಗೊಳಿಸಿ ತೆರಳುವವರೆಗೆ ಯಾವುದೇ ರೀತಿಯ ಸಂಚಾರ ವ್ಯತ್ಯಯ ಉಂಟಾಗದಂತೆ ಸಂಬಂಧಿತ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಮುಖ್ಯಮಂತ್ರಿಗಳ ಪ್ರವಾಸದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆಗೆ ಪ್ರಮುಖ ಆದ್ಯತೆ ನೀಡಲಾಗುವುದು. ಸಂಚಾರ ವ್ಯವಸ್ಥೆ ಸುಗಮವಾಗಿರುವಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್. ಅವರು ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಡಿಡಿಎಲ್‌ಆರ್ ಜಿ.ಜೆ. ರುದ್ರಣ್ಣಗೌಡ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ್ ಸೋಮನಕಟ್ಟಿ, ಡಿಡಿಪಿಐ ಆರ್.ಎಸ್. ಬುರಡಿ, ಆರ್‌ಟಿಒ ವಿಶಾಲ್, ರಾಜಾರಾಮ ಪವಾರ್, ವಸಂತ ಮಡ್ಲೂರ, ಕೊಟ್ರೇಶ್ ವಿಭೂತಿ, ಶರಣು ಗೊಗೇರಿ, ಡಾ. ಎಚ್.ಬಿ. ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಬರ ಪರಿಸ್ಥಿತಿ ಅವಲೋಕನ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ಹಾಗೂ ನಿಖರ ಮಾಹಿತಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಕಡ್ಡಾಯವಾಗಿ ಹಾಜರಾಗಬೇಕು. ಪ್ರವಾಸದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img