ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಮೊನ್ನೆ ಹೈಕಮಾಂಡ್ ನಾಯಕರು ನನಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಅವರು ಹೇಳಿದ ತಕ್ಷಣವೇ ನಾನು ‘ನಾಡಿದ್ದು ಕೊಡುತ್ತೇನೆ’ ಎಂದು ತಿಳಿಸಿದ್ದೆ. ಅದರಂತೆ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಹೇಳಿದರು.
“ನಾನು ಮೊದಲಿನಿಂದಲೂ ಹೇಳುತ್ತಿದ್ದೆ, ಹೈಕಮಾಂಡ್ ಯಾವಾಗ ಸೂಚನೆ ನೀಡುತ್ತದೆಯೋ ಆಗ ನಾನು ರಾಜೀನಾಮೆ ಕೊಡುತ್ತೇನೆ ಎಂದು. ಈಗ ಅದೇ ರೀತಿಯಲ್ಲಿ ನಡೆದುಕೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ರಾಜೀನಾಮೆ ಪ್ರಕ್ರಿಯೆ ಕುರಿತು ವಿವರಿಸಿದ ಅವರು, ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ರಾಜ್ಯಪಾಲರು ಸದ್ಯ ಬೆಂಗಳೂರಿನಲ್ಲಿ ಇಲ್ಲ ಎಂದು ಅಲ್ಲಿನ ಕಚೇರಿಯಲ್ಲಿ ತಿಳಿಸಿದರು. ಅವರು ಇಂದು ರಾತ್ರಿ ವಾಪಸ್ ಬರುತ್ತಾರೆ ಎಂದರು. ಹೀಗಾಗಿ ನನ್ನ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ರಾಜ್ಯಪಾಲರು ಮರಳಿದ ಬಳಿಕ ಸಂವಿಧಾನದ ಪ್ರಕಾರ ಪ್ರಕ್ರಿಯೆ ನಡೆಸಿ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ರಾಜ್ಯದ ರಾಜಕೀಯ ಸ್ಥಿತಿಗತಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ನಮ್ಮ ಪಕ್ಷ 135ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಕೂಡ ನಮ್ಮ ಬೆಂಬಲದಲ್ಲಿದ್ದಾರೆ. ರಾಜ್ಯದಲ್ಲಿ ನಮಗೆ ಸ್ಪಷ್ಟ ಬಹುಮತವಿದೆ ಎಂದು ಹೇಳಿದರು.
“ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಮುಂದಿನ ಮುಖ್ಯಮಂತ್ರಿಗೆ ಆಡಳಿತ ನಡೆಸಲು ಅವಕಾಶ ಕಲ್ಪಿಸುವುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ಯಾವುದೇ ಗೊಂದಲವಿಲ್ಲದೆ ಮುಂದಿನ ಸರ್ಕಾರದ ರಚನೆಗೆ ಅವಕಾಶ ಮಾಡಿಕೊಡಬೇಕು” ಎಂದು ಸಿದ್ದರಾಮಯ್ಯ ಮನವಿ ಮಾಡಿದರು.



