HomeKarnataka News9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಚಿತ್ರಮಂದಿರ ಮಾಲೀಕನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಚಿತ್ರಮಂದಿರ ಮಾಲೀಕನ ನಿರೀಕ್ಷಣಾ ಜಾಮೀನು ಅರ್ಜಿ ವಜಾ

For Dai;y Updates Join Our whatsapp Group

Spread the love

ಬೆಂಗಳೂರು: ಒಂಬತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಜೊತೆಗೆ ಜಾತಿ ನಿಂದನೆ ಹಾಗೂ ಆ್ಯಸಿಡ್ ದಾಳಿ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ 52 ವರ್ಷದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ರಾಮನಗರದ ಶಂಕರ ಚಿತ್ರಮಂದಿರದ ಮಾಲೀಕ ಎನ್. ಮಂಜುನಾಥ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠ ನಡೆಸಿ, ಅರ್ಜಿಯನ್ನು ವಜಾಗೊಳಿಸಿದೆ.

ಹೈಕೋರ್ಟ್ ಅಭಿಪ್ರಾಯವೇನು?

ಸಂತ್ರಸ್ತೆ ನೀಡಿರುವ ಹೇಳಿಕೆಗಳು ಹಾಗೂ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿಯ ವಿರುದ್ಧ ಮೇಲ್ನೋಟಕ್ಕೆ ಗಂಭೀರ ಸಾಕ್ಷ್ಯಾಧಾರಗಳು ಕಂಡುಬರುತ್ತಿವೆ ಎಂದು ಅಭಿಪ್ರಾಯಪಟ್ಟಿದೆ.

ದೂರು ದಾಖಲಿಸಿದ ಹಿನ್ನೆಲೆ ಆರೋಪಿಯು ಕೆಲವರನ್ನು ಮನೆಗೆ ಕಳುಹಿಸಿ ಜಾತಿ ನಿಂದನೆ ಮಾಡಿಸಿ ಬೆದರಿಕೆ ಹಾಕಿರುವ ಆರೋಪವೂ ಇದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಅಪರಾಧ ದೃಢಪಟ್ಟರೆ ನಿರೀಕ್ಷಣಾ ಜಾಮೀನು ನೀಡಲು ಅವಕಾಶವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಆದರೆ, ಆರೋಪಿಯು ವಿಚಾರಣಾ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಯನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಹಿನ್ನೆಲೆ

ರಾಮನಗರದ ಶಂಕರ ಚಿತ್ರಮಂದಿರದ ಮಾಲೀಕ ಹಾಗೂ ಕೃಷಿಕನಾಗಿರುವ ಮಂಜುನಾಥ, 9ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯ ಶಾಲೆ ಬಳಿ ನಿಂತು ಆಕೆಯನ್ನು ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಿರಂತರ ಕಿರುಕುಳದಿಂದ ಬೇಸತ್ತ ಬಾಲಕಿ 2024-25ನೇ ಸಾಲಿನಲ್ಲಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಳು ಎಂದು ತಿಳಿದುಬಂದಿದೆ.

ಬಾಲಕಿ ಪೊಲೀಸರಿಗೆ ದೂರು ನೀಡಲು ಮುಂದಾದ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿ, 2026ರ ಮಾರ್ಚ್ 14ರಂದು ಬಾಲಕಿಯ ಮನೆ ಬಳಿ ತೆರಳಿ ಜಾತಿ ನಿಂದನೆ ಮಾಡಿದ್ದಲ್ಲದೆ, ತನ್ನೊಂದಿಗೆ ಬಂದ ಕೆಲವರ ಮೂಲಕ ಬಾಲಕಿ ಹಾಗೂ ಆಕೆಯ ಅಜ್ಜಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಹಾಗೂ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ಬಾಲಕಿಗೆ ನಿರಂತರವಾಗಿ ಕರೆ ಮಾಡಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಲ್ಲದೆ, ಆಕೆಯ ಸ್ನೇಹಿತೆಯರನ್ನೂ ಕರೆತರಲು ಒತ್ತಾಯಿಸಿದ್ದಾನೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.

ವಾದ-ಪ್ರತಿವಾದ

ವಿಚಾರಣೆ ವೇಳೆ ಆರೋಪಿಯ ಪರ ವಕೀಲರು, ಬಾಲಕಿ ಮತ್ತು ಆಕೆಯ ಸ್ನೇಹಿತರು ಸಿನಿಮಾ ಟಿಕೆಟ್ ವಿಚಾರವಾಗಿ ಆರೋಪಿಯನ್ನು ಸಂಪರ್ಕಿಸುತ್ತಿದ್ದರು. ಬಳಿಕ ಹಣ ಹಾಗೂ ಆಸ್ತಿ ಕಸಿದುಕೊಳ್ಳಲು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಸುಳ್ಳು ದೂರು ನೀಡಲಾಗಿದೆ ಎಂದು ವಾದಿಸಿದರು.

ಇದಕ್ಕೆ ಸರ್ಕಾರದ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಂತ್ರಸ್ತೆ ಅಪ್ರಾಪ್ತೆಯಾಗಿದ್ದು, ಆರೋಪಿಯ ವಿರುದ್ಧ ಸ್ಪಷ್ಟ ಸಾಕ್ಷ್ಯಗಳಿವೆ. ಬಾಲಕಿ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 18ರ ಅನ್ವಯ ನಿರೀಕ್ಷಣಾ ಜಾಮೀನು ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!