ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ರೈತರ ಹೋರಾಟ ನಿರ್ಣಾಯಕ ಹಂತ ತಲುಪಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ನಡೆದ ಹಿಂಸಾತ್ಮಕ ಘಟನೆ ಬಳಿಕ ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ವಿಶೇಷ ಶೋಧ ಕಾರ್ಯ ಮುಂದುವರಿದಿದೆ.
ಘಟನೆಯ ಬಳಿಕ ಅಧಿಕಾರಿಗಳು ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೆ ಸರ್ಕಾರ ಮತ್ತೆ ಸರ್ವೆ ಆರಂಭಿಸಲು ಮುಂದಾದರೆ ಅದನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಉಗ್ರ ಪ್ರತಿಭಟನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಗ್ರಾಮಕ್ಕೆ ಬಂದು ಭೂಸರ್ವೆ ನಡೆಸಲು ಮುಂದಾದದ್ದೇ ಸಂಘರ್ಷಕ್ಕೆ ಕಾರಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಮಂಡಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.



