ಹೈದರಾಬಾದ್: ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕನೊಬ್ಬ ಭೀಕರ ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಜ್ಞಾಹೀನನಾದ ಘಟನೆ ಹೈದರಾಬಾದ್ನ ಕಾರ್ವಾನ್ ಪ್ರದೇಶದಲ್ಲಿ ನಡೆದಿದೆ. ಆದರೆ ಸಮಯಪ್ರಜ್ಞೆ ಮೆರೆದ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಸ್ಥಳದಲ್ಲೇ ಸಿಪಿಆರ್ ನೀಡಿ ಕಾರ್ಮಿಕನ ಜೀವ ಉಳಿಸುವ ಮೂಲಕ ಮಾನವೀಯತೆಯ ಮಾದರಿಯಾಗಿದ್ದಾರೆ.
ಕಾರ್ವಾನ್ನ ಕುಮ್ಮರವಾಡಿ ಹನುಮಾನ್ ದೇವಸ್ಥಾನದ ಸಮೀಪ TGPDCL ಗುತ್ತಿಗೆ ಕಾರ್ಮಿಕನೊಬ್ಬ ವಿದ್ಯುತ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಶಾಕ್ ತಗುಲಿ ಕೆಳಗೆ ಬಿದ್ದಿದ್ದಾನೆ. ಘಟನೆಯ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಟಪ್ಪಾಚಬುತ್ರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಬಿ. ಸುರೇಶ್ ಸ್ಥಳಕ್ಕೆ ಧಾವಿಸಿ ಕಾರ್ಮಿಕನ ಸ್ಥಿತಿ ಪರಿಶೀಲಿಸಿದ್ದಾರೆ.
ಕಾರ್ಮಿಕನ ನಾಡಿಮಿಡಿತ ಮತ್ತು ಉಸಿರಾಟ ಸ್ಥಗಿತಗೊಂಡಿರುವುದನ್ನು ಗಮನಿಸಿದ ಸುರೇಶ್ ಯಾವುದೇ ವಿಳಂಬ ಮಾಡದೆ ಸ್ಥಳದಲ್ಲೇ ಸಿಪಿಆರ್ ನೀಡಲು ಆರಂಭಿಸಿದ್ದಾರೆ. ಕೆಲ ನಿಮಿಷಗಳ ನಿರಂತರ ಪ್ರಯತ್ನದ ಬಳಿಕ ಕಾರ್ಮಿಕನ ಉಸಿರಾಟ ಹಾಗೂ ನಾಡಿಮಿಡಿತ ಪುನಃ ಆರಂಭವಾಗಿದೆ.
ಬಳಿಕ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



