ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಜಂಟಿ ಭೂಮಾಪನ ಕಾರ್ಯದ ವೇಳೆ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಜೆಎಂಸಿ ಸರ್ವೆಗೆ ತಡೆಯೊಡ್ಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದಡಿ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆ ನಡೆಸುವ ವೇಳೆ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಎನ್ನಲಾಗಿದೆ.
ಸರ್ವೆಗೆ ವಿರೋಧ ಮುಂದುವರಿಸಿದ ರೈತರು:
ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಗೆ ಒಳಪಡುವ ಹಲವು ಗ್ರಾಮಗಳಲ್ಲಿ ರೈತರು ಇದೀಗ ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲಾಡಳಿತ ಅಥವಾ ಅಧಿಕಾರಿಗಳು ಮತ್ತೆ ಜೆಎಂಸಿ ಸರ್ವೆ ಕಾರ್ಯ ಆರಂಭಿಸಲು ಮುಂದಾದರೆ ಸ್ಥಳದಲ್ಲೇ ತಡೆದು ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ಹಾಗೂ ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದಾರೆ.
ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸದ್ಯಕ್ಕೆ ಜೆಎಂಸಿ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಂಘರ್ಷಕ್ಕೆ ಅವಕಾಶ ನೀಡದೆ, ಮೊದಲು ಪ್ರತಿಭಟನಾಕಾರರೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಯೋಜನೆ ಪರ ಇರುವ ರೈತರ ಜಮೀನು ಸರ್ವೆಗೆ ಸಿದ್ಧತೆ:
ಇನ್ನೊಂದೆಡೆ, ಬಿಡದಿ ಟೌನ್‌ಶಿಪ್ ಯೋಜನೆಗೆ ಒಪ್ಪಿಗೆ ಸೂಚಿಸಿರುವ ರೈತರ ಜಮೀನುಗಳ ಜೆಎಂಸಿ ಸರ್ವೆ ಕಾರ್ಯವನ್ನು ಮುಂದುವರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಭದ್ರತೆ ಪಡೆದುಕೊಂಡು, ಯೋಜನೆ ಪರ ಇರುವ ರೈತರ ಜಮೀನುಗಳ ಸರ್ವೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ವಿರೋಧ, ಅಧಿಕಾರಿಗಳ ಕ್ರಮ ಹಾಗೂ ಮುಂದಿನ ಮಾತುಕತೆಗಳತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.



