ಬೆಂಗಳೂರು: ಆರ್ಥಿಕ ಸಂಕಷ್ಟ ಮತ್ತು ಸಾಲದ ಒತ್ತಡದಿಂದ ಬಳಲುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಇದೀಗ ಹೊಸ ಆದಾಯ ಮೂಲದ ಹುಡುಕಾಟಕ್ಕೆ ಮುಂದಾಗಿದೆ. ಈಗಾಗಲೇ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವ ನಿಗಮ, ಇನ್ನು ಮುಂದೆ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೂ ಜಾಹೀರಾತು ಮುದ್ರಿಸಲು ಟೆಂಡರ್ ಆಹ್ವಾನಿಸಿದೆ.
ನೌಕರರ ವೇತನ ಪರಿಷ್ಕರಣೆ ಹಾಗೂ ಬಾಕಿ ಪಾವತಿಗೆ ಹಣದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿದಿನ ಸುಮಾರು 6,275 ಬಸ್‌ಗಳಲ್ಲಿ 45 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ಈ ಬೃಹತ್ ಸಾರಿಗೆ ಜಾಲವನ್ನು ಬಳಸಿಕೊಂಡು ಒಂದು ವರ್ಷದ ಅವಧಿಗೆ ಟಿಕೆಟ್ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ.
ಸದ್ಯ ಬಿಎಂಟಿಸಿ ಜಾಹೀರಾತುಗಳಿಂದ ವಾರ್ಷಿಕವಾಗಿ ಸುಮಾರು 57.48 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು, ಟಿಕೆಟ್‌ಗಳ ಮೇಲಿನ ಜಾಹೀರಾತು ಯೋಜನೆಯಿಂದ ಆದಾಯ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಈ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಯ ಹೆಚ್ಚಿಸಲು ಇದು ಉತ್ತಮ ನಿರ್ಧಾರವಾದರೂ, ಟಿಕೆಟ್‌ಗಳ ಮೇಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಜಾಹೀರಾತುಗಳನ್ನೇ ಪ್ರಕಟಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಗುಟ್ಕಾ, ಪಾನ್ ಮಸಾಲಾ, ಮದ್ಯಪಾನ ಅಥವಾ ಯಾವುದೇ ಅಶ್ಲೀಲ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.
ಈ ಸಾರ್ವಜನಿಕ ಅಭಿಪ್ರಾಯಕ್ಕೆ ಸ್ಪಂದಿಸಿರುವ ಬಿಎಂಟಿಸಿ, ತಂಬಾಕು ಉತ್ಪನ್ನಗಳು, ಮಾದಕ ದ್ರವ್ಯಗಳು ಹಾಗೂ ಅಶ್ಲೀಲ ವಸ್ತುಗಳಿಗೆ ಸಂಬಂಧಿಸಿದ ಜಾಹೀರಾತುಗಳಿಗೆ ಸಂಪೂರ್ಣ ನಿಷೇಧ ಹೇರಿದೆ.
ಒಟ್ಟಿನಲ್ಲಿ, ನೌಕರರ ಬೇಡಿಕೆಗಳನ್ನು ಈಡೇರಿಸಲು ಹಣಕಾಸಿನ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿಗೆ ಟಿಕೆಟ್ ಜಾಹೀರಾತಿನ ಹೊಸ ಯೋಜನೆ ಎಷ್ಟು ಮಟ್ಟಿಗೆ ನೆರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.



