ಬೆಂಗಳೂರು: ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಲಬುರ್ಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್! ಇನ್ನಿಬ್ಬರಿಗಾಗಿ ಶೋಧ
ರಾಜ್ಯದಲ್ಲಿ ಈವರೆಗೆ 32ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಆಂಧ್ರಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ ಕರ್ನಾಟಕದಲ್ಲೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಸದ್ಯ ರಾಜ್ಯದಲ್ಲಿ ದಾಖಲಾಗಿರುವ ಪ್ರಕರಣಗಳು ಗಂಭೀರ ಸ್ವರೂಪದಲ್ಲಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಕೇವಲ 14 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಜುಲೈ ತಿಂಗಳ ಮೊದಲ 10 ದಿನಗಳಲ್ಲೇ ಈ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
ಒಟ್ಟು 193 ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 32 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಆಯುಕ್ತ ಗುರುದತ್ ಹೆಗಡೆ, ಆಂಧ್ರಪ್ರದೇಶದ ಕಡಪಾದಲ್ಲಿ ವರದಿಯಾಗಿರುವ ಸಾವುಗಳು ಸದ್ಯಕ್ಕೆ ಶಂಕಿತ ಪ್ರಕರಣಗಳಾಗಿವೆ. ಈ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳು ಸದ್ಯಕ್ಕೆ ತೀವ್ರ ಸ್ವರೂಪದಲ್ಲಿಲ್ಲ. ಯಾವುದೇ ಲಕ್ಷಣಗಳಿಲ್ಲದ ಸೋಂಕುಗಳು ಕೂಡ ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸುವ ಕಡ್ಡಾಯ ಪರೀಕ್ಷೆ ವೇಳೆ ಪತ್ತೆಯಾಗುತ್ತಿವೆ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



