ಗದಗ: ನಗರದ ಹೃದಯಭಾಗದಲ್ಲೇ ಹಾಡಹಗಲೇ ಖದೀಮನೊಬ್ಬ ಕ್ಷಣಾರ್ಥದಲ್ಲಿ ಬೈಕ್ ಕದ್ದು ಪರಾರಿಯಾದ ಘಟನೆ ಗದಗದಲ್ಲಿ ನಡೆದಿದೆ.
ನಗರದ ಕೆ.ಸಿ. ರಾಣಿ ರಸ್ತೆಯಲ್ಲಿ ನಡೆದ ಈ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು, ಕಳ್ಳನ ಚಾಕಚಕ್ಯತೆ ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಗಣೇಶ್ ಹುಬ್ಬಳ್ಳಿ ಎಂಬುವರಿಗೆ ಸೇರಿದ KA-26 EB-9527 ನಂಬರ್‌ನ ದ್ವಿಚಕ್ರ ವಾಹನವನ್ನು ಖದೀಮ ಕದ್ದು ಪರಾರಿಯಾಗಿದ್ದಾನೆ. ಬೆಳಿಗ್ಗೆ ವೇಳೆಯಲ್ಲೇ ಸಾರ್ವಜನಿಕರ ಸಂಚಾರ ನಡುವೆ ಆರೋಪಿ ಯಾವುದೇ ಆತಂಕವಿಲ್ಲದೆ ಬೈಕ್ ಎಗರಿಸಿರುವುದು ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.
ಕಳ್ಳತನದ ಬಳಿಕ ಬೈಕ್ ಅನ್ನು ಕೊಪ್ಪಳ ಮಾರ್ಗವಾಗಿ ಕೊಂಡೊಯ್ಯಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಚೆಕ್‌ಪೋಸ್ಟ್‌ಗಳಿಗೆ ವಾಹನದ ಮಾಹಿತಿ ರವಾನಿಸಿದ್ದಾರೆ. ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯ ಪತ್ತೆಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಅವಳಿ ನಗರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ವಾಹನ ಕಳ್ಳತನ ಪ್ರಕರಣಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಪೊಲೀಸರು ರಾತ್ರಿ ಹಾಗೂ ಬೆಳಗಿನ ಜಾವ ಗಸ್ತು ಹೆಚ್ಚಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.



