ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಲವಾರು ವರ್ಷಗಳಿಂದ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಡೆಯುತ್ತಿರುವ ಚಿಕನ್, ಮೀನು, ಕುರಿ ಹಾಗೂ ಮಾಂಸ ಮಾರಾಟ ಅಂಗಡಿಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಪುರಸಭೆ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ಶ್ರೀರಾಮ್ ಸೇನೆ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗಡದಾರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮ್ ಸೇನೆ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಹಿಂದೂ ಯುವ ಮುಖಂಡರಾದ ಗಂಗಾಧರ ಮೆಣಸಿನಕಾಯಿ, ಸೋಮೇಶ ಉಪನಾಳ, ಮಂಜುನಾಥ ಹೊಗೆಸೊಪ್ಪಿನ ಅವರು, ದೇವಸ್ಥಾನದ ಹಿಂಭಾಗದಲ್ಲಿ ದಶಕಗಳಿಂದ ಮಾಂಸ ಮಾರಾಟ ಅಂಗಡಿಗಳು ಹಾಗೂ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನಕ್ಕೆ ಸಮೀಪದಲ್ಲೇ ಮಾಂಸ ಸಾಗಣೆ ನಡೆಯುತ್ತಿದ್ದು, ಈ ಕುರಿತು ಹಲವು ವರ್ಷಗಳಿಂದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪುರಸಭೆಯವರು ಮಾಂಸ ಮಾರಾಟಗಾರರಿಗೆ ಭಯಪಡುತ್ತಿದ್ದಾರೆ. ಅಧಿಕಾರಿಗಳು ಮಾಂಸ ವ್ಯಾಪಾರಿಗಳೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ” ಎಂದು ಅವರು ಆರೋಪಿಸಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರೂ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದ ಅವರು, ಇನ್ನೂ ಒಂದು ತಿಂಗಳೊಳಗೆ ಅಂಗಡಿಗಳನ್ನು ಸ್ಥಳಾಂತರಿಸದಿದ್ದರೆ ಪುರಸಭೆ ಎದುರು ಸಮಸ್ತ ಹಿಂದೂ ಸಂಘಟನೆಗಳಿಂದ ತೆರವುಗೊಳಿಸುವವರೆಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಜಾರ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ವರ್ತಕರಾದ ಚಂಬಣ್ಣ ಬಾಳಿಕಾಯಿ ಹಾಗೂ ವಿಜಯ ಹತ್ತಿಕಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಸೋಮೇಶ್ವರ ದೇವಸ್ಥಾನ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ್ ಕುಲಕರ್ಣಿ, ದುಂಡೇಶ ಕೊಟಗಿ, ಥಾವರಪ್ಪ ಲಮಾಣಿ, ರಾಜು ಅಂದಲಗಿ, ಬಸವರಾಜ ಚಕ್ರಸಾಲಿ, ಶಿವಣ್ಣ ಲಮಾಣಿ, ಪುಂಡಲೀಕ ಲಮಾಣಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಗಿರೀಶ ಚೌರಡ್ಡಿ, ಮಲ್ಲಿಕಾರ್ಜುನ ನೀರಾಲೋಟ, ಶಕ್ತಿ ಕತ್ತಿ, ವಿಶಾಲ ಬಟಗುರ್ಕಿ, ಅಮಿತ ಗುಡಗೇರಿ, ಮಹಾಂತೇಶ ರಗಟಿ, ಮಹಾದೇವಪ್ಪ ಅಣ್ಣಿಗೇರಿ, ಹನುಮಂತ ರಾಮಗೇರಿ, ಸಂತೋಷ ಬೋಮಲೆ, ಸುಮಂಗಲಾ ಕುಂಬಾರ, ಗೀತಾ ಬಡಿಗೇರ, ಶೋಭಾ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಒಂದು ತಿಂಗಳೊಳಗೆ ಮಾಂಸ ಅಂಗಡಿಗಳನ್ನು ಸ್ಥಳಾಂತರಿಸದಿದ್ದರೆ ಪುರಸಭೆ ಎದುರು ಸಮಸ್ತ ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.”ಈರಣ್ಣ ಪೂಜಾರ, ಶ್ರೀರಾಮ್ ಸೇನೆ ತಾಲೂಕು ಅಧ್ಯಕ್ಷ
- ಒಂದು ತಿಂಗಳ ಗಡುವು!
- ಸೋಮೇಶ್ವರ ದೇವಸ್ಥಾನ ಹಿಂಭಾಗದಲ್ಲೇ ಮಾಂಸ ಅಂಗಡಿಗಳ ಕಾರ್ಯಾಚರಣೆ
- ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
- ನಾಲ್ಕು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಂದ ತೆರವು ಆದೇಶ
- ಇನ್ನೂ ತೆರವು ಕಾರ್ಯವಾಗಿಲ್ಲವೆಂದು ಆರೋಪ
- “ಅಧಿಕಾರಿಗಳು ಮಾಂಸ ವ್ಯಾಪಾರಿಗಳ ಜೊತೆ ಶಾಮೀಲು” ಎಂದು ಟೀಕೆ
- ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ



