ಕಲಬುರಗಿ: ಬಕ್ರೀದ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ ಮುಸ್ಲಿಂ ಕುಟುಂಬವೊಂದು ಗೋಶಾಲೆಗೆ ಮೇವು ದೇಣಿಗೆ ನೀಡುವ ಮೂಲಕ ಸೌಹಾರ್ದತೆಯ ಸಂದೇಶ ರವಾನಿಸಿದೆ. ಮುಸ್ಲಿಂ ಮುಖಂಡ ಸೈಯದ್ ಜಾಫರ್ ಉಲ್ ಹಸನ್ ಅವರು ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಮೇವನ್ನು ಗೋಶಾಲೆಗೆ ನೀಡಿದ್ದು, ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ತಮ್ಮ ತಂದೆ, ತಾಯಿ ಹಾಗೂ ಸಹೋದರಿಯ ಸ್ಮರಣಾರ್ಥ ಈ ದೇಣಿಗೆ ನೀಡಲಾಗಿದ್ದು, ಗೋವುಗಳ ಹಸಿವು ನೀಗಿಸುವ ಕಾರ್ಯದಲ್ಲಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಂಬಳೇಶ್ವರ ಸೊಮಶೇಖರ ಶಿವಾಚಾರ್ಯರು, ಹಬ್ಬದ ದಿನವೇ ಗೋಶಾಲೆಗೆ ನೆರವು ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸಮಾಜದಲ್ಲಿ ಧರ್ಮದ ಹೆಸರಿಗಿಂತ ಮಾನವೀಯತೆ, ಕರುಣೆ ಮತ್ತು ಪ್ರಾಣಿದಯೆ ಮುಖ್ಯ ಎಂಬುದನ್ನು ಈ ಕುಟುಂಬ ಸಾಬೀತುಪಡಿಸಿದೆ ಎಂದು ಹೇಳಿದರು.
ಗೋಶಾಲೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಕುಟುಂಬದ ಸೇವಾ ಮನೋಭಾವವನ್ನು ಕೊಂಡಾಡಿ ಅಭಿನಂದಿಸಿದರು.



