ಮಂಗಳೂರು: ರಸ್ತೆ ಮಧ್ಯೆ ಪ್ರಜ್ಞಾಹೀನರಾಗಿ ಬಿದ್ದಿದ್ದ ತಾಯಿ ಮತ್ತು ಮಗುವಿನ ಜೀವ ಉಳಿಸಲು ಸಿಟಿ ಬಸ್ ಸಿಬ್ಬಂದಿ ತೋರಿದ ಮಾನವೀಯತೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಯಾಣಿಕರನ್ನು ಕೆಳಗಿಳಿಸಿ, ತಮ್ಮ ಬಸ್ಸನ್ನೇ ತುರ್ತು ವಾಹನವಾಗಿ ಬಳಸಿದ ಚಾಲಕ ಮತ್ತು ನಿರ್ವಾಹಕ ಇಬ್ಬರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮರಕಡ ಜಂಕ್ಷನ್ ಬಳಿ ನಡೆದ ಅಪಘಾತದಲ್ಲಿ ತಾಯಿ ಮತ್ತು ಪುಟ್ಟ ಮಗು ಮತ್ತೊಂದು ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ಆತಂಕಗೊಂಡಿದ್ದ ವೇಳೆ, ರೂಟ್ ನಂ.13Bರ ‘ಮಾಸ್ಟರ್’ ಬಸ್ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದಾರೆ.
ಚಾಲಕ ದಯಾನಂದ್ ಹಾಗೂ ನಿರ್ವಾಹಕ ಸಂದೀಪ್ ಯಾವುದೇ ವಿಳಂಬ ಮಾಡದೇ ಗಾಯಾಳುಗಳನ್ನು ತಮ್ಮ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಮಯವನ್ನು ವ್ಯರ್ಥ ಮಾಡದೇ ತೆಗೆದುಕೊಂಡ ಈ ನಿರ್ಧಾರವೇ ಜೀವ ರಕ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಸಾಮಾನ್ಯ ಕರ್ತವ್ಯವನ್ನು ಮೀರಿ ಮಾನವೀಯತೆಯನ್ನು ಮೆರೆದಿರುವ ಈ ಇಬ್ಬರು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಕಾರ್ಯ ವೈರಲ್ ಆಗಿದೆ. “ಸೇವೆಯೇ ಧರ್ಮ” ಎಂಬುದನ್ನು ಅವರು ತಮ್ಮ ಕೃತಿಯಿಂದ ಸಾಬೀತುಪಡಿಸಿದ್ದಾರೆ.



