ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತ್ರಿಭಾಷಾ ನೀತಿಯನ್ನು ಜಾರಿಗೊಳಿಸಿದ್ದು, ಹೊಸ ವ್ಯವಸ್ಥೆಯಡಿ ವಿದ್ಯಾರ್ಥಿಗಳು ಮೂರನೇ ಭಾಷೆಯ ಮೌಲ್ಯಮಾಪನದಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು ಎಂದು ಸೂಚಿಸಿದೆ. ಆದರೆ, ಈ ಮೌಲ್ಯಮಾಪನವು 2027–28ನೇ ಸಾಲಿನ 10ನೇ ತರಗತಿ ಬೋರ್ಡ್ ಪರೀಕ್ಷೆಯ ಭಾಗವಾಗಿರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಜುಲೈ 10ರಂದು ಈ ಕುರಿತು ಸುತ್ತೋಲೆ ಹೊರಡಿಸಿರುವ ಸಿಬಿಎಸ್ಇ, 10ನೇ ತರಗತಿಯಲ್ಲಿ R3 (ಮೂರನೇ ಭಾಷೆ) ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟಿಸುವ ಮುನ್ನ ಮತ್ತೊಮ್ಮೆ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಹೊಸ ನಿಯಮದಂತೆ, ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ಕಲಿತಿದ್ದ ಮೂರು ಭಾಷೆಗಳನ್ನೇ 9ನೇ ತರಗತಿಯಲ್ಲೂ ಮುಂದುವರಿಸಬೇಕು. ಅವುಗಳಲ್ಲಿ ಒಂದನ್ನು R3 ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಶಾಲೆಗಳ ಅನುಕೂಲಕ್ಕಾಗಿ ಎನ್ಸಿಇಆರ್ಟಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ R3 ಭಾಷೆಯ ಕಲಿಕಾ ಸಂಪನ್ಮೂಲಗಳನ್ನು ಪ್ರಕಟಿಸಿದೆ.
ತ್ರಿಭಾಷಾ ನೀತಿಯ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಮೂರು ಭಾಷೆಗಳನ್ನು ಕಲಿಯಬೇಕು. ವಿಶೇಷ ವಿನಾಯಿತಿಗಳನ್ನು ಹೊರತುಪಡಿಸಿ, ಈ ಮೂರರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿರಬೇಕು. ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂಗ್ಲಿಷ್, ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳನ್ನು ಭಾರತೀಯೇತರ ಭಾಷೆಗಳೆಂದು ಪರಿಗಣಿಸಲಾಗುತ್ತದೆ.
ಸಿಬಿಎಸ್ಇ ಸ್ಪಷ್ಟಪಡಿಸಿರುವಂತೆ, 2026–27ನೇ ಶೈಕ್ಷಣಿಕ ವರ್ಷದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ನಿಯಮವೇ ಅನ್ವಯವಾಗಲಿದೆ. ಅವರು ಕೇವಲ ಎರಡು ಭಾಷೆಗಳನ್ನೇ ಕಲಿಯಲಿದ್ದು, ಮೂರನೇ ಭಾಷೆ ಕಡ್ಡಾಯವಾಗಿರುವುದಿಲ್ಲ.
ಮೂರನೇ ಭಾಷೆಯ (R3) ಮೌಲ್ಯಮಾಪನವನ್ನು ಶಾಲಾ ಮಟ್ಟದ ಆಂತರಿಕ ಪರೀಕ್ಷೆಗಳ ಮೂಲಕವೇ ನಡೆಸಲಾಗುತ್ತದೆ. ಈ ಬ್ಯಾಚ್ನ ವಿದ್ಯಾರ್ಥಿಗಳು 10ನೇ ತರಗತಿಗೆ ಬಂದಾಗ ಮೂರನೇ ಭಾಷೆಗೆ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.



