ನವದೆಹಲಿ: ಸೇವಾ ನಿರತ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಎಂಬ ತನ್ನ ಹಿಂದಿನ ನಿಲುವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಪುನರುಚ್ಚರಿಸಿದೆ. ಆದರೆ ಶಿಕ್ಷಕರಿಗೆ ಅನುಕೂಲವಾಗುವಂತೆ ಟಿಇಟಿ ಉತ್ತೀರ್ಣರಾಗಲು ನೀಡಿದ್ದ ಗಡುವನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ.
ಅಂಜುಮನ್ ಇಶಾತ್-ಎ-ತಲೀಮ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯ ಸರ್ಕಾರಗಳು, ಶಿಕ್ಷಕರ ಸಂಘಗಳು ಹಾಗೂ ವೈಯಕ್ತಿಕ ಶಿಕ್ಷಕರು ಸಲ್ಲಿಸಿದ್ದ 65ಕ್ಕೂ ಹೆಚ್ಚು ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009 ಜಾರಿಯಾಗುವ ಮೊದಲು ನೇಮಕಗೊಂಡಿರುವ ಹಾಗೂ ನಿವೃತ್ತಿಗೆ ಐದು ವರ್ಷಗಳಿಗಿಂತ ಹೆಚ್ಚು ಅವಧಿ ಉಳಿದಿರುವ ಶಿಕ್ಷಕರು ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸುಪ್ರೀಂ ಕೋರ್ಟ್ 2025ರಲ್ಲಿ ಆದೇಶಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ವಿಚಾರಣೆ ವೇಳೆ ನ್ಯಾಯಪೀಠ, ಟಿಇಟಿ ಪರೀಕ್ಷೆಯನ್ನು ಸಂಬಂಧಿತ ಅಧಿಕಾರಿಗಳು ಸಮರ್ಪಕವಾಗಿ ನಡೆಸಲು ಅಗತ್ಯ ಸಮಯ ಮತ್ತು ಸಂಪನ್ಮೂಲಗಳ ಮಿತಿಯನ್ನು ಪರಿಗಣಿಸಿ, ಈ ಹಿಂದೆ ನಿಗದಿಪಡಿಸಿದ್ದ ಎರಡು ವರ್ಷದ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಅದರಂತೆ ಶಿಕ್ಷಕರು 2027ರ ಆಗಸ್ಟ್ 31ರ ಬದಲಿಗೆ 2028ರ ಆಗಸ್ಟ್ 31ರೊಳಗೆ ಟಿಇಟಿ ಅರ್ಹತೆ ಪಡೆಯಬೇಕು ಎಂದು ಆದೇಶಿಸಿದೆ.
ಕನಿಷ್ಠ ಅರ್ಹತೆ ಕಡ್ಡಾಯ
ಆರ್‌ಟಿಇ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಸೇವೆಯಲ್ಲಿರುವ ಶಿಕ್ಷಕರೂ ನಿಗದಿತ ಅವಧಿಯೊಳಗೆ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಶಿಕ್ಷಕರ ವೃತ್ತಿಯ ಗುಣಮಟ್ಟ ಕಾಪಾಡಲು ಟಿಇಟಿ ಪರೀಕ್ಷೆ ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಶಿಕ್ಷಕರಿಂದ ಪ್ರತಿಭಟನೆ
ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಶಿಕ್ಷಕರು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದರು. ಟೀಚರ್ಸ್ ಫೆಡರೇಶನ್ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು, ಟಿಇಟಿ ಕಡ್ಡಾಯಗೊಳಿಸುವ ನಿರ್ಧಾರದಿಂದ ಲಕ್ಷಾಂತರ ಶಿಕ್ಷಕರ ಉದ್ಯೋಗ ಭದ್ರತೆಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದಿಂದ ಸುಮಾರು 20 ಲಕ್ಷ ಶಿಕ್ಷಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾನಿರತ ಶಿಕ್ಷಕರು ಆಗ್ರಹಿಸಿದ್ದರು.
ಆದರೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಟಿಇಟಿ ಅರ್ಹತೆಯನ್ನು ಕಡ್ಡಾಯಗೊಳಿಸಿರುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಶಿಕ್ಷಕರು ನಿಗದಿತ ಗಡುವಿನೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿದೆ.



