ಗದಗ: ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ಜೋರಾಗಿರುವ ನಡುವೆಯೇ ಗದಗ ಜಿಲ್ಲೆಯ ರೋಣ ಶಾಸಕ ಜಿ.ಎಸ್. ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಸಚಿವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕೆಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ನಾನು 1989ರಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನಾಲ್ಕು ಬಾರಿ ಜನರಿಂದ ಅಧಿಕ ಮತಗಳ ಅಂತರದಲ್ಲಿ ಆಯ್ಕೆಯಾಗಿದ್ದೇನೆ. ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿದಿದ್ದೇನೆ. ಹೀಗಾಗಿ ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ನೀಡಬೇಕು,” ಎಂದು ಅವರು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಶಿಸ್ತು ಮತ್ತು ತ್ಯಾಗ ಮನೋಭಾವವನ್ನು ಉದಾಹರಿಸಿದ ಜಿ.ಎಸ್. ಪಾಟೀಲ್, “ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಕಳಂಕ ರಹಿತವಾಗಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಅವರು ರಾಜೀನಾಮೆ ನೀಡಿ ಮಾದರಿಯಾಗಿದ್ದರು. ಅದೇ ರೀತಿಯಲ್ಲಿ ಈಗಿರುವ ಹಿರಿಯ ಸಚಿವರೂ ಕೂಡ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು,” ಎಂದು ಅವರು ಹೇಳಿದ್ದಾರೆ.
ಹಿರಿಯರನ್ನು ಬದಲಾಯಿಸಿ ಹೊಸ ಮುಖಗಳಿಗೆ ಅವಕಾಶ ನೀಡುವ ಕಾಲ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು,
“ಡಿ.ಕೆ. ಶಿವಕುಮಾರ್ ಹುಟ್ಟು ಹೋರಾಟಗಾರ. ಅವರ ಹೋರಾಟ ಮತ್ತು ಸಂಘಟನೆ ಸಾಮರ್ಥ್ಯವನ್ನು ಗುರುತಿಸಿ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದುಕೊಂಡಿದೆ,” ಎಂದು ಶ್ಲಾಘಿಸಿದರು.
ಈಗಾಗಲೇ ಸುಮಾರು 35ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಬೆಂಗಳೂರು ಮತ್ತು ದೆಹಲಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದೇವೆ ಎಂದು ತಿಳಿಸಿರುವ ಜಿ.ಎಸ್. ಪಾಟೀಲ್, “ಈ ಬಾರಿ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ವಿಶ್ವಾಸ ಇದೆ,” ಎಂದು ಹೇಳಿದ್ದಾರೆ.



