ಬೆಂಗಳೂರು: ನನಗೆ ಯಾರೂ ಹೂವಿನ ಹಾರ ಹಾಕಬೇಡಿ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಉತ್ಸಾಹವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ವಿವಿಧ ಕಾರಣಗಳಿಂದ ಪ್ರಮಾಣ ವಚನ ಸಮಾರಂಭಕ್ಕೆ ಹೆಚ್ಚು ಜನರನ್ನು ಆಹ್ವಾನಿಸಲು ಸಾಧ್ಯವಾಗುವುದಿಲ್ಲ. ಹೊರಗಡೆ ಬಂದು ನೋಡಿದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
“ಯಾರೂ ನನಗೆ ಹೂವಿನ ಹಾರ ಹಾಕಬೇಡಿ. ನನಗೆ ಅಲರ್ಜಿ ಸಮಸ್ಯೆ ಇದೆ. ಕೆಲ ಹೂವಿನ ಹಾರಗಳಲ್ಲಿ ಇರುವ ಪರಾಗಧೂಳು ಹಾಗೂ ಸುಗಂಧದಿಂದ ಚರ್ಮದಲ್ಲಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಯಾವ ಹೂವಿನ ಹಾರವೂ ತರಬೇಡಿ ಎಂದು ನಾನು ಮನವಿ ಮಾಡಿದ್ದೇನೆ,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಯಾದ ಹಾರ-ತೋರಣಗಳನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕೂಡ ಅವರು ಹೇಳಿದರು.



