ಮಂಗಳೂರು: ಕರ್ನಾಟಕ ವಿಧಾನಮಂಡಲದ ಕಾರ್ಯವೈಖರಿಯಲ್ಲಿ ಐತಿಹಾಸಿಕ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಕಲಾಪಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಕಾಗದರಹಿತ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಯೋಜನೆಯಡಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಇನ್ನು ಮುಂದೆ ಕಾಗದದ ದಾಖಲೆಗಳ ಬದಲಿಗೆ ಐಪ್ಯಾಡ್ಗಳ ಮೂಲಕವೇ ಕಲಾಪಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಲಿದ್ದಾರೆ. ಅಧಿವೇಶನದ ಕಾರ್ಯಸೂಚಿ, ಪ್ರಶ್ನೋತ್ತರಗಳು, ವಿಧೇಯಕಗಳು ಹಾಗೂ ಇತರ ದಾಖಲೆಗಳು ಡಿಜಿಟಲ್ ರೂಪದಲ್ಲೇ ಸದಸ್ಯರಿಗೆ ತಲುಪಲಿವೆ.
ಈ ಉದ್ದೇಶಕ್ಕಾಗಿ ಕರ್ನಾಟಕ ವಿಧಾನಮಂಡಲವು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA) ಯೋಜನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು ಮತ್ತು ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಸಭೆ ಡಿಜಿಟಲೀಕರಣಕ್ಕೆ 78 ಕೋಟಿ ರೂ. ಹಾಗೂ ವಿಧಾನಪರಿಷತ್ ಡಿಜಿಟಲೀಕರಣಕ್ಕೆ 52 ಕೋಟಿ ರೂ. ಸೇರಿದಂತೆ ಒಟ್ಟು 130 ಕೋಟಿ ರೂ. ವೆಚ್ಚವಾಗಲಿದೆ. ಯೋಜನೆಗೆ ಕೇಂದ್ರ ಸರ್ಕಾರ ಶೇ.60ರಷ್ಟು ಆರ್ಥಿಕ ನೆರವು ನೀಡಲಿದೆ.
ಇದರ ಜೊತೆಗೆ ಶಾಸಕರ ಹಾಜರಾತಿ ವ್ಯವಸ್ಥೆಯನ್ನೂ ಸಂಪೂರ್ಣ ಡಿಜಿಟಲ್ ಮಾದರಿಗೆ ಪರಿವರ್ತಿಸಲಾಗುತ್ತಿದೆ. ವಿಧಾನಸೌಧದ ವಿವಿಧ ಕಚೇರಿಗಳು, ಅಧಿಕಾರಿಗಳ ವಿವರಗಳು ಹಾಗೂ ಸಾರ್ವಜನಿಕ ಮಾಹಿತಿ ನೀಡಲು ಸೌಧದ ಆವರಣದಲ್ಲಿ ಡಿಜಿಟಲ್ ಮಾಹಿತಿ ಕೇಂದ್ರಗಳು (ಕಿಯೋಸ್ಕ್ಗಳು) ಸ್ಥಾಪಿಸಲಾಗುತ್ತದೆ.
ಕಲಾಪದ ದಾಖಲೆಗಳು ಕಳೆದುಹೋಗುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಈ ಯೋಜನೆ, ಆಡಳಿತದ ವೇಗ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.



