ಲಕ್ನೋ: ಐಪಿಎಲ್ 2026ರ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ವೃಂದಾವನಕ್ಕೆ ಭೇಟಿ ನೀಡಿ ಆಧ್ಯಾತ್ಮಿಕ ಆಶೀರ್ವಾದ ಪಡೆದಿದ್ದಾರೆ.
VIRAT KOHLI & ANUSHKA SHARMA AT VRINDAVAN TO TAKD BLESSINGS OF PREMANAND JI MAHARAJ. 🙏
– Virat Kohli chanting "Radhe, Radhe" at Vrindavan. ♥️pic.twitter.com/KirpYKZZvt
— Tanuj (@ImTanujSingh) June 2, 2026
ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜರ ‘ರಾಧಾ ಕೇಳಿ ಕುಂಜ್’ ಆಶ್ರಮಕ್ಕೆ ಆಗಮಿಸಿದ ದಂಪತಿ, ಮಹಾರಾಜರ ದರ್ಶನ ಪಡೆದು ಆಶೀರ್ವಾದ ಪಡೆದರು. ಆಶ್ರಮದಲ್ಲಿ ಕೆಲ ಸಮಯ ಕಳೆದ ಅವರು ಸರಳ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
ಪ್ರಸ್ತುತ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಆಶ್ರಮಕ್ಕೆ ಭೇಟಿ ನೀಡಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕ್ರಿಕೆಟ್ ಮೈದಾನದಲ್ಲಿ ತನ್ನ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆಯುವ ಕೊಹ್ಲಿ, ಆಶ್ರಮದಲ್ಲಿ ವಿನಮ್ರವಾಗಿ ಕೈಮುಗಿದು ನಿಂತಿರುವ ದೃಶ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ವೃಂದಾವನಕ್ಕೆ ಈ ಜೋಡಿ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಿಂದಲೂ ವಿರಾಟ್ ಮತ್ತು ಅನುಷ್ಕಾ ಹಲವು ಬಾರಿ ವೃಂದಾವನಕ್ಕೆ ಭೇಟಿ ನೀಡಿ ಪ್ರೇಮಾನಂದ್ ಮಹಾರಾಜರ ಆಶೀರ್ವಾದ ಪಡೆಯುತ್ತಿದ್ದಾರೆ. ಪ್ರಮುಖ ಸಾಧನೆಗಳ ಬಳಿಕ ಅಥವಾ ವಿಶೇಷ ಸಂದರ್ಭಗಳಲ್ಲಿ ಅವರು ಆಶ್ರಮಕ್ಕೆ ತೆರಳಿ ಆಧ್ಯಾತ್ಮಿಕ ಶಾಂತಿಯನ್ನು ಅರಸುವುದು ಗಮನಾರ್ಹವಾಗಿದೆ.
ಇದಕ್ಕೂ ಮುನ್ನ ಐಪಿಎಲ್ ಪ್ರಶಸ್ತಿ ಗೆಲುವಿನ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಫೋಟೋ ಹಂಚಿಕೊಂಡಿದ್ದರು. ಆರ್ಸಿಬಿ ತಂಡದ ಐತಿಹಾಸಿಕ ಗೆಲುವಿನ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಅವರು, ವಿರಾಟ್ ಕೊಹ್ಲಿಯೊಂದಿಗೆ ಟ್ರೋಫಿ ಹಿಡಿದು ನಿಂತಿರುವ ಚಿತ್ರವನ್ನು ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.
ಐಪಿಎಲ್ನಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ ಖುಷಿಯ ನಡುವೆಯೇ ಆಧ್ಯಾತ್ಮಿಕ ತಾಣಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿರುವ ವಿರಾಟ್-ಅನುಷ್ಕಾ ದಂಪತಿಯ ಈ ನಡೆ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.



