ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭ ಸೋಮವಾರ ಹಬ್ಬದ ಸಂಭ್ರಮದಲ್ಲಿ ನಡೆಯಿತು. ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳಿಗೆ ಗುಲಾಬಿ ಹೂ ನೀಡಿ, ಬಾಯಿ ಸಿಹಿ ಮಾಡುವ ಮೂಲಕ ಶಿಕ್ಷಕ ಬಳಗ ಆತ್ಮೀಯವಾಗಿ ಸ್ವಾಗತ ಕೋರಿತು. ಶಾಲಾ ಆವರಣ ಮಕ್ಕಳ ನಗು, ಬಣ್ಣಬಣ್ಣದ ರಂಗೋಲಿ ಹಾಗೂ ಸಂಭ್ರಮದ ವಾತಾವರಣದಿಂದ ಕಂಗೊಳಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ, “ವಿಶೇಷ ಚೇತನ ಮಕ್ಕಳು ನಿಜಕ್ಕೂ ವಿಶೇಷ ಪ್ರತಿಭೆಗಳುಳ್ಳವರು. ಅವರನ್ನು ಪಾಲಕರು ಮತ್ತು ಶಿಕ್ಷಕರು ಪ್ರೀತಿ, ಸ್ನೇಹ ಹಾಗೂ ತಾಳ್ಮೆಯಿಂದ ನೋಡಿಕೊಳ್ಳಬೇಕು. ಅವರ ಬುದ್ಧಿಮಟ್ಟಕ್ಕೆ ತಕ್ಕ ಶಿಕ್ಷಣ ನೀಡಿದರೆ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಸೇವಾ ಟ್ರಸ್ಟ್‌ನ ಈ ಸಂಸ್ಥೆ ಹಲವು ವರ್ಷಗಳಿಂದ ವಿಶೇಷ ಮಕ್ಕಳ ಸೇವೆಗೆ ಸಮರ್ಪಿತವಾಗಿದ್ದು, “ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ಹಳೆಯ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
ಶಾಲೆಯ ಕಾರ್ಯದರ್ಶಿ ಜಯರಾಜ ಮುಳಗುಂದ ಮಾತನಾಡಿ, “ವಿಶೇಷ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅನುಭವಿ ಶಿಕ್ಷಕ ಬಳಗ ಪ್ರತಿ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಮಕ್ಕಳ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ” ಎಂದರು.
ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ನಾಗಲಾಪೂರ, ಡಾ. ಉಮೇಶ ಹಾದಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ಸ್ವಾಗತಿಸಿದರು. ಸದಸ್ಯ ಬಸವರಾಜ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ನಿರ್ವಾಹಕ ಮಲ್ಲಿಕಾರ್ಜುನ ನಾಗಲಾಪೂರ ವಂದನಾರ್ಪಣೆ ಸಲ್ಲಿಸಿದರು.
ಶಿಕ್ಷಕ-ಶಿಕ್ಷಕಿಯರಾದ ಜಗದೀಶ ಹಡಪದ, ಜಯಶ್ರೀ ಭಾವರೆ, ಸುರೇಶ ಹಾದಿ ಹಾಗೂ ಸಿಬ್ಬಂದಿಗಳಾದ ರೇಣುಕಾ ದಾಸರ, ವೀಣಾ ಕೊಲ್ಲಾಪುರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆಯ ಆವರಣ ಗುಲಾಬಿ ಹೂವಿನ ಸುವಾಸನೆ, ಮೈಸೂರಪಾಕ್ ಸಿಹಿ ಹಂಚಿಕೆ ಹಾಗೂ ಮಕ್ಕಳ ಸಂಭ್ರಮದಿಂದ ಕಳೆಗಟ್ಟಿತ್ತು. ಶೈಕ್ಷಣಿಕ ವರ್ಷದ ಮೊದಲ ದಿನವೇ ಮಕ್ಕಳ ಮುಖದಲ್ಲಿ ಮೂಡಿದ ಸಂತಸ ಪಾಲಕರಲ್ಲೂ ಹೊಸ ವಿಶ್ವಾಸ ಮೂಡಿಸಿತು.



