HomeGadag News15ವರ್ಷ ಅಲೆದ್ರೂ ಸಿಗಲಿಲ್ಲ ಸೂರು!

15ವರ್ಷ ಅಲೆದ್ರೂ ಸಿಗಲಿಲ್ಲ ಸೂರು!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ 2012ರಿಂದ ಕಡುಬಡವರು ಹಾಗೂ ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಇಂದಿಗೂ ವಿತರಣೆಯಾಗದಿರುವುದನ್ನು ಖಂಡಿಸಿ ಪಟ್ಟಣದ ಮಹಿಳೆಯರು ಪಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸದಸ್ಯರ ಆಡಳಿತಾವಧಿಯಲ್ಲಿಯೂ ಪೂರ್ಣಗೊಂಡಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಸುಮಾರು 4000 ಅರ್ಜಿಗಳ ಪೈಕಿ 373 ಫಲಾನುಭವಿಗಳ ಹೆಸರಿನ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಸರಿಯಾದ ರೀತಿಯಲ್ಲಿ ಹಂಚಿಕೆ ಪ್ರಕ್ರಿಯೆ ನಡೆಯದೇ ತಟಸ್ಥ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿ ನಿವೇಶನ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ಪರಿಶೀಲನೆಯೂ ನಡೆದಿತ್ತು. ಆದರೆ ಅಂತಿಮ ಹಂಚಿಕೆ ಕಾರ್ಯ ಮಾತ್ರ ಇನ್ನೂ ಆರಂಭವಾಗಿಲ್ಲ ಎಂದು ಮಹಿಳೆಯರು ಕಿಡಿಕಾರಿದರು.
ಕಳೆದ ವಾರ ಪಪಂ ಕಚೇರಿಗೆ ಬಂದಾಗ ಮುಖ್ಯಾಧಿಕಾರಿ ಸೋಮವಾರ ಬರುವಂತೆ ತಿಳಿಸಿದ್ದರು. ಆದರೆ ಸೋಮವಾರ ಬಂದಾಗ ಮುಖ್ಯಾಧಿಕಾರಿಯೇ ಕಾರ್ಯಾಲಯದಲ್ಲಿ ಇರಲಿಲ್ಲ. “ಕಳೆದ ಹಲವು ವರ್ಷಗಳಿಂದ ನಾವು ಹೀಗೆಯೇ ಕಚೇರಿಗೆ ಸುತ್ತಿ ಸಾಕಾಗಿದೆ. ಆದರೆ ಅಂದು ಬಾ, ಇಂದು ಬಾ ಎಂದು ಹೇಳುತ್ತಿದ್ದು, ನಿವೇಶನ ರಹಿತರ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯೇ ಇಲ್ಲವಾಗಿದೆ” ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಒಂದು ಪಟ್ಟಿ ಸದಸ್ಯರ ಅವಧಿಯಲ್ಲಿ ಸಿದ್ಧವಾಗಿತ್ತು. ಆದರೆ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಈಗಾಗಲೇ ಮನೆ ಹೊಂದಿರುವವರಿಗೆ, ಎರಡು-ಮೂರು ಅಂತಸ್ತಿನ ಕಟ್ಟಡ ಹೊಂದಿರುವವರಿಗೆ, ಒಂದೇ ಕುಟುಂಬದ ಇಬ್ಬರು-ಮೂರು ಜನರಿಗೆ, ಸದಸ್ಯರ ಹಿಂಬಾಲಕರಿಗೆ, ಸದಸ್ಯರ ಸೊಸೆಯಂದಿರು ಹಾಗೂ ಹೆಂಡತಿಯರಿಗೆ ನಿವೇಶನ ನೀಡಲಾಗಿದೆ. ಆದರೆ ನಿಜವಾದ ಬಡವರಿಗೆ ನಿವೇಶನ ನೀಡದೇ ಸರ್ಕಾರದ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.
ಈ ನಿವೇಶನಗಳಿಗಾಗಿ 2012, 2017 ಹಾಗೂ 2024ರಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದೇವೆ. ಆದರೂ ನಮಗೆ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಬಾಡಿಗೆ ಮನೆಯ ಕಷ್ಟ ತಪ್ಪಿಸುವಂತೆ ಮಹಿಳೆಯರು ಮನವಿ ಮಾಡಿದರು.
ಮುಖ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಅವರು ಬೆಂಗಳೂರಿಗೆ ತೆರಳಿರುವುದಾಗಿ ತಿಳಿಸಿ, ಶುಕ್ರವಾರ ಬರುವಂತೆ ಹೇಳಿದ್ದಾರೆ. ಅಷ್ಟರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಇನ್ನಷ್ಟು ಮಹಿಳೆಯರನ್ನು ಸೇರಿಸಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
“2012ರಿಂದ ಬಾಡಿಗೆ ಮನೆಯಲ್ಲಿದ್ದೇವೆ. ಅಂದಿನಿಂದಲೇ ಅರ್ಜಿ ಸಲ್ಲಿಸುತ್ತಿದ್ದೇವೆ. ದುಡಿಮೆ ಬಿಟ್ಟು ಕಾರ್ಯಾಲಯಕ್ಕೆ ಅಲೆದು ಸಾಕಾಗಿದೆ. ಈ ಬಾರಿ ಪಟ್ಟಿಯಲ್ಲಿ ನನ್ನ ಹೆಸರು ಬಂದರೂ ನಿವೇಶನ ನೀಡಿಲ್ಲ.”
ಯಾಸ್ಮಿನ್ ಬೇಗಂ ಇಬ್ರಾಹಿಂಸಾಬ ಮಕಾಂದಾರ
ವಾರ್ಡ್ ನಂ.17ರ ನಿವಾಸಿ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!