ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ. ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ದೊರಕಲಿ ಎಂದು ಮುದ್ಗಲ್ ಅಲೈದೇವರಲ್ಲಿ ಹರಕೆ ಹೊತ್ತು 51 ಕೆಜಿ ಸಕ್ಕರೆ ನೈವೇದ್ಯ ಅರ್ಪಿಸುವುದಾಗಿ ಕಾಂಗ್ರೆಸ್ ಮುಖಂಡರು ಘೋಷಿಸಿದ್ದಾರೆ.
ಸೋಮವಾರ ನಿಡಗುಂದಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, “ರಾಜ್ಯದಲ್ಲೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಮುದ್ಗಲ್ ಮೊಹರಂ ಹಬ್ಬ ತನ್ನದೇ ಆದ ಇತಿಹಾಸ ಹೊಂದಿದೆ. ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಅಲೈದೇವರು ಭಕ್ತರ ಇಚ್ಛೆಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಹೀಗಾಗಿ ಶಾಸಕ ಜಿ. ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರಕಲಿ ಎಂದು ಈ ಬಾರಿ ವಿಶೇಷ ಹರಕೆ ಹೊತ್ತಿದ್ದೇವೆ” ಎಂದು ಹೇಳಿದರು.
“ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಮುದ್ಗಲ್‌ಗೆ ತೆರಳಿ ಅಲೈದೇವರ ದರ್ಶನ ಪಡೆದುಕೊಳ್ಳುತ್ತೇವೆ. ಈ ಬಾರಿಯೂ ದೇವರ ದರ್ಶನಕ್ಕೆ ತೆರಳುತ್ತಿದ್ದು, ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ ಸಲ್ಲಿಸಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸುತ್ತೇವೆ” ಎಂದು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಪಕ್ಕೀರಪ್ಪ ಕುಕನೂರ ಮಾತನಾಡಿ, “ಜಿ. ಎಸ್. ಪಾಟೀಲರು ಸಮಾಜಮುಖಿ ಹಾಗೂ ಜಾತ್ಯಾತೀತ ತತ್ವಗಳನ್ನು ಹೊಂದಿರುವ ನಾಯಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರಿಗೆ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಆಗ್ರಹ” ಎಂದರು.
“ನಾವು ನಂಬಿಕೊಂಡಿರುವ ಮುದ್ಗಲ್ ಅಲೈದೇವರಿಗೆ ಮೊಹರಂ ಹಬ್ಬದಲ್ಲಿ 51 ಕೆಜಿ ಸಕ್ಕರೆ ನೈವೇದ್ಯ ಸಮರ್ಪಿಸಲು ಹರಕೆ ಹೊತ್ತಿದ್ದೇವೆ. ಅಲೈದೇವರು ಶಾಸಕ ಜಿ. ಎಸ್. ಪಾಟೀಲರಿಗೆ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.
“ಜಿ. ಎಸ್. ಪಾಟೀಲರು ದೈವಭಕ್ತಿಯುಳ್ಳ ವ್ಯಕ್ತಿಯಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಸಿಗಲಿದೆ” ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



