ಕಲಬುರಗಿ: ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿಯ ಮೇಲೆ ಸಹವಿದ್ಯಾರ್ಥಿಗಳೇ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ.
ಮದ್ಯ ತಂದುಕೊಡುವಂತೆ ಹಾಗೂ 30 ಸಾವಿರ ಹಣ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ಆರೋಪಿಸಿದ್ದಾನೆ. ನಗರದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.
ಹಾಸ್ಟೆಲ್ನ ಕೊಠಡಿಗಳಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಹಾಗೂ ಸಿಗರೇಟ್ ಪ್ಯಾಕೆಟ್ಗಳು ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಹಲ್ಲೆಗೊಳಗಾದ ವಿದ್ಯಾರ್ಥಿಯ ಮೈಮೇಲೂ ಗಾಯದ ಗುರುತುಗಳಿವೆ.
ಮದ್ಯ ತರುವಂತೆ, ₹30 ಸಾವಿರ ನೀಡುವಂತೆ ಕಿರುಕುಳ:
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಚಿತ್ತಾಪುರದ ಸುಮಿತ್ ಎಂದು ಗುರುತಿಸಲಾಗಿದೆ. ಈತ ಕಲಬುರಗಿಯ ಅಂಬೇಡ್ಕರ್ ವಸತಿ ನಿಲಯದಲ್ಲಿ ವಾಸವಿದ್ದು, ಹೆಚ್ಕೆಎಸ್ ಪಾಲಿಟೆಕ್ನಿಕ್ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದಾನೆ. ಅಕ್ಟೋಬರ್ 29ರಂದು ಹಾಸ್ಟೆಲ್ಗೆ ಬಂದಿದ್ದ ಸುಮಿತ್ಗೆ ಮೊದಲ ದಿನದಿಂದಲೇ ಕೆಲವರು ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ.
ಸುಮಿತ್ ಕೊಠಡಿಯಲ್ಲಿದ್ದ ವೇಳೆ ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ ಸೇರಿದಂತೆ ಕೆಲವರು ಹಾಸ್ಟೆಲ್ನಲ್ಲಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮದ್ಯ ತಂದುಕೊಡುವಂತೆ ಹಾಗೂ ₹30 ಸಾವಿರ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಹಣ ನೀಡಲು ನಿರಾಕರಿಸಿದಾಗ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಮಿತ್ ಆರೋಪಿಸಿದ್ದಾನೆ.
ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ತಾಯಿ:
ಹಾಸ್ಟೆಲ್ನಲ್ಲಿ ತನ್ನ ಮೇಲೆ ಹಲ್ಲೆ ನಡೆದಿರುವ ವಿಚಾರವನ್ನು ಸುಮಿತ್ ತಾಯಿಗೆ ದೂರವಾಣಿ ಮೂಲಕ ತಿಳಿಸಿದ್ದಾನೆ. ವಿಷಯ ತಿಳಿದು ಹಾಸ್ಟೆಲ್ಗೆ ಆಗಮಿಸಿದ ತಾಯಿ ಸುಭದ್ರಮ್ಮ, ಮಗನ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಹಾಸ್ಟೆಲ್ ವಾರ್ಡನ್ ಕೂಡ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳ ಜೊತೆಗೆ ವಾರ್ಡನ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಮಿತ್ ತಾಯಿ ಸುಭದ್ರಮ್ಮ ಆಗ್ರಹಿಸಿದ್ದಾರೆ.
ಆರೋಪಿಗಳಿಗಾಗಿ ಪೊಲೀಸರ ಶೋಧ:
ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ಗೆ ಬಂದ ವಿದ್ಯಾರ್ಥಿಯ ಮೇಲೆ ಸಹವಿದ್ಯಾರ್ಥಿಗಳೇ ಕಿರುಕುಳ ನೀಡಿ ಹಲ್ಲೆ ನಡೆಸಿರುವ ಆರೋಪ ಆತಂಕಕ್ಕೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಹಲ್ಲೆಗೆ ನಿಖರ ಕಾರಣವೇನು ಎಂಬುದೂ ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳ ಕುರಿತು ತನಿಖೆ ಮುಂದುವರಿದಿದೆ.










