ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಭೂಮಿಯ ವಾತಾವರಣ ಪ್ರವೇಶಿಸಲು ಸಜ್ಜಾಗಿದೆ.
‘ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ’ ಹೆಸರಿನ ಈ ಉಪಗ್ರಹದ ಅವಶೇಷಗಳು ಭೂಮಿಯ ಯಾವ ಭಾಗದಲ್ಲಿ ಬೀಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ಪತನ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳೂ ಸೇರಿರುವುದು ಕುತೂಹಲ ಮೂಡಿಸಿದೆ.
ಭಾರತೀಯ ಕಾಲಮಾನ ಪ್ರಕಾರ ಇಂದು ಮಧ್ಯಾಹ್ನ ಸುಮಾರು 2 ಗಂಟೆಯೊಳಗೆ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ವಾತಾವರಣ ಪ್ರವೇಶಿಸುವ ವೇಳೆ ಉಂಟಾಗುವ ತೀವ್ರ ಶಾಖದಿಂದ ಉಪಗ್ರಹದ ಬಹುತೇಕ ಭಾಗಗಳು ಸುಟ್ಟು ನಾಶವಾಗಲಿವೆ. ಆದರೆ ಕೆಲವು ಗಟ್ಟಿಯಾದ ಲೋಹದ ತುಣುಕುಗಳು ಭೂಮಿಯ ಮೇಲ್ಮೈ ತಲುಪುವ ಸಾಧ್ಯತೆಯೂ ಇದೆ.
ಬೆಂಗಳೂರು, ಮುಂಬೈ, ಚೆನ್ನೈ ನಗರಗಳೂ ಸಂಭಾವ್ಯ ವಲಯದಲ್ಲಿ!
ನಾಸಾ ಗುರುತಿಸಿರುವ ಸಂಭಾವ್ಯ ಪತನ ವಲಯದಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಆಗ್ನೇಯ ಏಷ್ಯಾ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳು ಸೇರಿವೆ. ಭಾರತದ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ನಗರಗಳೂ ಈ ವ್ಯಾಪ್ತಿಯಲ್ಲಿವೆ.
ಆದರೆ ಈ ನಗರಗಳ ಮೇಲೆಯೇ ಉಪಗ್ರಹದ ಅವಶೇಷಗಳು ಬೀಳುತ್ತವೆ ಎಂದರ್ಥವಲ್ಲ. ಸದ್ಯಕ್ಕೆ ನಿಖರವಾದ ಪತನ ಸ್ಥಳವನ್ನು ಗುರುತಿಸಲು ಸಾಧ್ಯವಾಗಿಲ್ಲ. ಉಪಗ್ರಹದ ಹೆಚ್ಚಿನ ಅವಶೇಷಗಳು ಜನವಸತಿಯಿಲ್ಲದ ಸಮುದ್ರ ಪ್ರದೇಶಕ್ಕೆ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸುವ ಸಮಯದಲ್ಲಿ ಅದರ ಕಕ್ಷೆಯಲ್ಲಿನ ಸ್ಥಾನವನ್ನು ಆಧರಿಸಿ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದು ನಿರ್ಧಾರವಾಗಲಿದೆ. ಹೀಗಾಗಿ ಅಂತಿಮ ಕ್ಷಣದವರೆಗೂ ಪತನದ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
2004ರಲ್ಲಿ ಉಡಾವಣೆಗೊಂಡಿದ್ದ ಉಪಗ್ರಹ:
ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿಯನ್ನು 2004ರ ನವೆಂಬರ್ 20ರಂದು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಆರಂಭದಲ್ಲಿ ಕೇವಲ ಎರಡು ವರ್ಷಗಳ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದ್ದ ಈ ಉಪಗ್ರಹ ಸುಮಾರು 1.5 ಟನ್ ತೂಕ ಹೊಂದಿದೆ. ಆದರೆ ತನ್ನ ನಿರೀಕ್ಷಿತ ಕಾರ್ಯಾವಧಿಯನ್ನು ಮೀರಿ ಬರೋಬ್ಬರಿ 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ.
2,000ಕ್ಕೂ ಹೆಚ್ಚು ಗಾಮಾ ಕಿರಣಗಳ ಸ್ಫೋಟಗಳ ಅಧ್ಯಯನ:
ಬಾಹ್ಯಾಕಾಶದಲ್ಲಿ ಸಂಭವಿಸುವ ಗಾಮಾ ಕಿರಣಗಳ ಸ್ಫೋಟಗಳನ್ನು (Gamma Ray Bursts) ಅಧ್ಯಯನ ಮಾಡುವುದು ಈ ಉಪಗ್ರಹದ ಪ್ರಮುಖ ಉದ್ದೇಶವಾಗಿತ್ತು. ತನ್ನ ಕಾರ್ಯಾಚರಣೆಯ ಅವಧಿಯಲ್ಲಿ 2,000ಕ್ಕೂ ಹೆಚ್ಚು ಗಾಮಾ ಕಿರಣಗಳ ಸ್ಫೋಟಗಳನ್ನು ಅಧ್ಯಯನ ಮಾಡಿದೆ. ಅಲ್ಲದೆ, 1,400ಕ್ಕೂ ಹೆಚ್ಚು ಸೂಪರ್ನೋವಾ ಘಟನೆಗಳ ವೀಕ್ಷಣೆಗೂ ಕೊಡುಗೆ ನೀಡಿದೆ.
ಹೀಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ 22 ವರ್ಷಗಳ ಹಳೆಯ ಉಪಗ್ರಹ ಇದೀಗ ತನ್ನ ಕಾರ್ಯಾಚರಣೆಗೆ ಅಂತ್ಯ ಹಾಡುತ್ತಿದ್ದು, ಅದರ ಅವಶೇಷಗಳು ಎಲ್ಲಿ ಪತನವಾಗಲಿವೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.









