ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಂತಸದ ಸುದ್ದಿ ನೀಡಿದೆ.
ಬುಧವಾರದಿಂದ ಈ ಮಾರ್ಗದಲ್ಲಿ ಹೆಚ್ಚುವರಿ 2 ರೈಲುಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಸೇವಾ ಆವರ್ತನೆ ಹೆಚ್ಚಿಸಲಾಗುತ್ತಿದೆ.
ಹೊಸ ಬದಲಾವಣೆಯ ಪ್ರಕಾರ ಪೀಕ್ ಅವರ್‌ನಲ್ಲಿ ಇನ್ಮುಂದೆ 7 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಈವರೆಗೆ ಪೀಕ್ ಅವರ್‌ನಲ್ಲಿ 9 ನಿಮಿಷಕ್ಕೊಂದು ರೈಲು ಸಂಚಾರವಿತ್ತು. ಸಾಮಾನ್ಯ ಸಮಯದಲ್ಲಿ ರೈಲುಗಳ ನಡುವಿನ ಅವಧಿಯನ್ನು 14 ನಿಮಿಷದಿಂದ 10 ನಿಮಿಷಕ್ಕೆ ಇಳಿಸಲಾಗಿದೆ.
ವಾರಾಂತ್ಯದಲ್ಲಿ ದಿನವಿಡೀ 10 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಎರಡು ಹೆಚ್ಚುವರಿ ರೈಲುಗಳ ಸೇರ್ಪಡೆಯೊಂದಿಗೆ ಯೆಲ್ಲೋ ಲೈನ್‌ನಲ್ಲಿ ಪ್ರತಿದಿನ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸಲಿದ್ದು, ಇದರಿಂದ ನಿರೀಕ್ಷಾ ಸಮಯ ಕಡಿಮೆಯಾಗುವ ಜೊತೆಗೆ ಸೇವಾ ದಕ್ಷತೆ ಹೆಚ್ಚಲಿದೆ ಎಂದು ಸಂಸ್ಥೆ ಹೇಳಿದೆ.



