ನೆಲಮಂಗಲ: ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ನಡೆದ ಘಟನೆ ನಡೆದಿದೆ.
ಬೈಕಿನಲ್ಲಿ ಬಂದಿದ್ದ ಮೂವರು ದರೋಡೆಕೋರರು ಕೈಯಲ್ಲಿ ಚಾಕು ಹಿಡಿದು ಅಂಗಡಿಗೆ ನುಗ್ಗಿ ಕೆಲವೇ ಸೆಕೆಂಡ್‌ಗಳಲ್ಲಿ ಚಿನ್ನಾಭರಣ ಕಳವು ಮಾಡಿದ್ದಾರೆ.
ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದ ಈ ಘಟನೆಯಲ್ಲಿ ಸುಮಾರು 4.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳುವಾಗಿರುವುದಾಗಿ ತಿಳಿದುಬಂದಿದೆ. ಕೇವಲ 30 ಸೆಕೆಂಡ್‌ಗಳಲ್ಲೇ ದರೋಡೆ ನಡೆದಿದ್ದು, ದರೋಡೆಕೋರರು ಶೋ-ಗ್ಲಾಸ್‌ನಲ್ಲಿ ಇಟ್ಟಿದ್ದ ರಿಂಗ್ ಟ್ರೇನನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ಅಂಗಡಿಯಲ್ಲಿ ಸುಮಾರು 20 ಉಂಗುರಗಳಿದ್ದ ಟ್ರೇ ಇಡಲಾಗಿದ್ದು, ದರೋಡೆ ವೇಳೆ ಕೆಲವು ಉಂಗುರಗಳು ರಸ್ತೆಯಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. ನಂತರದ ಪರಿಶೀಲನೆಯಲ್ಲಿ ಸುಮಾರು 5 ಉಂಗುರಗಳು ಕಳುವಾಗಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ನಂತರ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.



