ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ ನಿವೃತ್ತ ವ್ಯವಸ್ಥಾಪಕ ಹಾಗೂ ಹಿರಿಯ ಕ್ರೀಡಾಪಟು ಉಳವೇಶ ದಾನಪ್ಪ ಅಂಗಡಿ (94) ಅವರು ಜೂನ್ 1ರ ಸೋಮವಾರ ರಾತ್ರಿ ನಿಧನರಾದರು. ಅವರ ಕುಟುಂಬಸ್ಥರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೂಲತಃ ಗದಗ ತಾಲೂಕಿನ ಹೊಸಳ್ಳಿ ಗ್ರಾಮದವರಾದ ಉಳವೇಶ ಅಂಗಡಿ ಅವರು ಹಾಲಿ ಗದಗ ನಗರದಲ್ಲಿ ವಾಸವಾಗಿದ್ದರು. ಜೂನ್ 2ರಂದು ಅವರ ಅಂತ್ಯಕ್ರಿಯೆ ನೆರವೇರಿತು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನದ ಸುದ್ದಿ ತಿಳಿದ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮೃತರ ನೇತ್ರಗಳನ್ನು ದಾನ ಮಾಡುವಂತೆ ಮನವಿ ಮಾಡಿದಾಗ ಕುಟುಂಬಸ್ಥರು ಉದಾರ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದರು.
ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಗಮಿಸಿ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
94 ವರ್ಷಗಳ ತುಂಬು ಜೀವನ ನಡೆಸಿದ್ದ ಉಳವೇಶ ಅಂಗಡಿ ಅವರು ನಗರಸಭೆಯ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಸಾವಿನ ನಂತರವೂ ಅಂಧರ ಬಾಳಿಗೆ ಬೆಳಕಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಉಳವೇಶ ಅಂಗಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ರಮೇಶ ಶಿಗ್ಲಿ, ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಮುತ್ತು ಮುಲ್ಕಿಪಾಟೀಲ, ಗಿರೀಶ್ ಪಾಟೀಲ, ಜಗದೀಶ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಉಳವೇಶ ಅಂಗಡಿ ಅವರ ನೇತ್ರದಾನ ಮತ್ತೊಬ್ಬರ ಬದುಕಿಗೆ ಬೆಳಕಾಗಿದ್ದು, ಇದು ಸಮಾಜಕ್ಕೆ ಮಾದರಿಯಾದ ಮಾನವೀಯ ಕಾರ್ಯ.”
ರಾಜಣ್ಣ ಮಲ್ಲಾಡದ, ಕಾರ್ಯದರ್ಶಿ, ಗದಗ-ಬೆಟಗೇರಿ ಲಯನ್ಸ್ ಕ್ಲಬ್



