ವಿಜಯಸಾಕ್ಷಿ ಸುದ್ದಿ, ಗದಗ: “ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಅವರ ಭವಿಷ್ಯ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಗದಗ ಶಹರ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಪ್ರಭಯ್ಯನಮಠ ಹೇಳಿದರು.
ಗದಗ ಹುಡ್ಕೋ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರ-ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಕಾರ್ಯಕ್ರಮ ಉದ್ಘಾಟಿಸಿ, “ಸರ್ಕಾರಿ ಶಾಲೆಗಳು ಪ್ರಗತಿಯ ದ್ಯೋತಕ. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು” ಎಂದರು.
ಬಿಸಿಯೂಟ ಯೋಜನಾಧಿಕಾರಿ ಶಂಕರ ಹಡಗಲಿ, ಶೈಕ್ಷಣಿಕ ಚಿಂತಕ ಡಾ. ಬಸವರಾಜ ಧಾರವಾಡ, ಎಸ್‌ಡಿಎಂಸಿ ಅಧ್ಯಕ್ಷೆ ನಂದಾ ಖಟವಟೆ, ಸದಸ್ಯ ಪ್ರಕಾಶ ಶೇಂದ್ರೆ, ನಾಮನಿರ್ದೇಶಿತ ಸದಸ್ಯ ದುರ್ಗಪ್ಪ ವಿಭೂತಿ ಮಾತನಾಡಿ ಸರ್ಕಾರಿ ಶಾಲೆಗಳ ಗುಣಮಟ್ಟ ಹಾಗೂ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯ ವೈ. ಎಚ್. ತೆಕ್ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಭೂಮಿಕಾ ಶೇಂದ್ರೆ (98.24%), ಉಮಾಮಹೇಶ್ವರಿ ಬುಕ್‌ಸಾಗರಮಠ (91.84%), ಮೇಹಕ್ ಇಲ್ಲಾಳ (90.88%) ಅವರನ್ನು ಸನ್ಮಾನಿಸಲಾಯಿತು.
ಮಕ್ಕಳಿಗೆ ಹೂವು ಹಾಕಿ, ಆರತಿ ಮಾಡಿ, ಸಿಹಿ ಹಂಚುವ ಮೂಲಕ ಹೊಸ ಶೈಕ್ಷಣಿಕ ವರ್ಷದ ಸ್ವಾಗತ ಮಾಡಲಾಯಿತು.
“ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕೇಂದ್ರಗಳಾಗಿವೆ.”ಎಸ್. ಪಿ. ಪ್ರಭಯ್ಯನಮಠ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ



