ಬೆಂಗಳೂರು: ನಗರದ ವಿಜ್ಞಾನನಗರದ ಆದರ್ಶ ವಿಸ್ತಾ ವಿಲ್ಲಾದಲ್ಲಿ ತಂದೆ-ತಾಯಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪದಡಿ ಬಂಧನಕ್ಕೊಳಗಾಗಿರುವ ಟೆಕ್ಕಿ ರೋಹನ್ ಚಂದ್ರ ಭಟ್ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಘಟನೆ ಬಳಿಕ ರೋಹನ್ ಸ್ಕಿಜೋಫ್ರೇನಿಯಾ ಸೇರಿದಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎಂಬ ಮಾಹಿತಿ ಹರಿದಾಡಿದ್ದರೂ, ನಿಮ್ಹಾನ್ಸ್ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಸಂಪೂರ್ಣ ಮಾನಸಿಕವಾಗಿ ಸದೃಢನಾಗಿದ್ದಾನೆ ಎಂಬುದು ದೃಢಪಟ್ಟಿದೆ.
ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್‌ಚಂದ್ರ ಭಟ್ ಹಾಗೂ ದಂತ ವೈದ್ಯೆ ಡಾ. ಶ್ಯಾಮಲಾ ಭಟ್ ಅವರನ್ನು ಚಾಕುವಿನಿಂದ ಇರಿದು ಕೊಂದ ಪ್ರಕರಣದ ತನಿಖೆ ವೇಳೆ ಆರೋಪಿಯನ್ನು ನಿಮ್ಹಾನ್ಸ್‌ಗೆ ದಾಖಲಿಸಿ ವೈದ್ಯಕೀಯ ವೀಕ್ಷಣೆಗೆ ಒಳಪಡಿಸಲಾಗಿತ್ತು. ಒಂದು ವಾರದ ಪರಿಶೀಲನೆ ಬಳಿಕ ವೈದ್ಯರು ರೋಹನ್‌ಗೆ ಒತ್ತಡ, ಆತಂಕ ಅಥವಾ ಸ್ಕಿಜೋಫ್ರೇನಿಯಾ ಸೇರಿದಂತೆ ಯಾವುದೇ ಗಂಭೀರ ಮಾನಸಿಕ ಕಾಯಿಲೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿ ನೀಡಿದ್ದಾರೆ.
ಪೊಲೀಸ್ ತನಿಖೆ ಪ್ರಕಾರ, ಸ್ಟಾರ್ಟ್‌ಅಪ್ ಆರಂಭಿಸಲು 10 ಲಕ್ಷ ರೂಪಾಯಿ ನೀಡುವಂತೆ ಪೋಷಕರನ್ನು ರೋಹನ್ ಒತ್ತಾಯಿಸಿದ್ದ. ಆದರೆ ಉದ್ಯೋಗ ಪಡೆದು ಸ್ಥಿರವಾಗುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಇದೇ ವಿಚಾರದಲ್ಲಿ ಆತನ ಅಸಮಾಧಾನ ಹೆಚ್ಚಾಗಿತ್ತು.
ಇದರ ಜೊತೆಗೆ ತನ್ನ ಮೊಬೈಲ್ ಸಂಖ್ಯೆಯನ್ನು ಜಿಯೋದಿಂದ ಏರ್‌ಟೆಲ್‌ಗೆ ಪೋರ್ಟ್ ಮಾಡಲು ತಂದೆ ಅವಕಾಶ ನೀಡದಿದ್ದ ವಿಚಾರವೂ ಕುಟುಂಬದೊಳಗಿನ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಈ ಎರಡೂ ವಿಚಾರಗಳ ಬಗ್ಗೆ ನಡೆದ ತೀವ್ರ ವಾಗ್ವಾದವೇ ಫೆಬ್ರವರಿ 11ರಂದು ನಡೆದ ಭೀಕರ ಕೊಲೆಗೆ ಕಾರಣವಾಯಿತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಸುಮಾರು 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, 40ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು ಹಾಗೂ ಫಾರೆನ್ಸಿಕ್ ವರದಿಗಳನ್ನು ಸೇರಿಸಿದ್ದಾರೆ. ಆರೋಪಿಯ ಬಟ್ಟೆ ಮತ್ತು ದೇಹದಲ್ಲಿ ಪತ್ತೆಯಾದ ರಕ್ತದ ಕಲೆಗಳು ಮೃತ ಪೋಷಕರದ್ದೇ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.



