ಬೀದರ್: ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿದ್ದ ಕಳಪೆ ಆಹಾರ ಹಾಗೂ ಕೊಳೆತ ತರಕಾರಿಗಳ ವಿರುದ್ಧ ವಿದ್ಯಾರ್ಥಿಗಳೇ ಧ್ವನಿ ಎತ್ತಿದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳು ಆಹಾರ ಮಾದರಿಗಳನ್ನು ಹಿಡಿದು ಶಾಸಕ ಶರಣು ಸಲಗರ್ ನಿವಾಸಕ್ಕೆ ತೆರಳಿ ಸಮಸ್ಯೆ ವಿವರಿಸಿದ್ದಾರೆ.
ವಿದ್ಯಾರ್ಥಿಗಳ ಅಹವಾಲು ಆಲಿಸಿದ ಶಾಸಕ ಶರಣು ಸಲಗರ್, ತರಲಾದ ಆಹಾರ ಮತ್ತು ತರಕಾರಿಗಳನ್ನು ಪರಿಶೀಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ಸ್ಪಷ್ಟನೆ ಕೇಳಿದರು.
ಸರ್ಕಾರ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವಾಗ ಹಾಸ್ಟೆಲ್‌ಗಳಲ್ಲಿ ಇಂತಹ ಅವ್ಯವಸ್ಥೆ ಸಹಿಸಲಾಗದು ಎಂದು ಶಾಸಕ ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.
ಇದೇ ವೇಳೆ ತಮ್ಮ ನಿವಾಸದಲ್ಲೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿಸಿ ಮಾನವೀಯತೆ ಮೆರೆದ ಶಾಸಕ, ಹಾಸ್ಟೆಲ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಘಟನೆ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಾಸ್ಟೆಲ್‌ಗಳ ಆಹಾರ ಗುಣಮಟ್ಟದ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.



