ಚೆನ್ನೈ: ‘ಕಿಲ್ಲರ್’ ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟವು ಒಬ್ಬ ಯುವ ತಂತ್ರಜ್ಞನ ಜೀವ ಬಲಿತೆಗೆದುಕೊಂಡಿದ್ದು, ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಚೆನ್ನೈ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಬಿನ್ನಿ ಮಿಲ್ಸ್‌ನಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ಮುಂಜಾನೆ ಸಾಹಸ ದೃಶ್ಯದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿತ್ತು. ವಿಶೇಷ ಎಫೆಕ್ಟ್ಸ್‌ಗಾಗಿ ಬಳಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಚಿತ್ರೀಕರಣ ಸ್ಥಳದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಯಿತು.
ಸ್ಫೋಟದಲ್ಲಿ ಗಾಯಗೊಂಡ ನಾಲ್ವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ 26 ವರ್ಷದ ತಂತ್ರಜ್ಞ ಮದನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉಳಿದ ಮೂವರು ತಂತ್ರಜ್ಞರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುರಂತದ ಬೆನ್ನಲ್ಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಶೂಟಿಂಗ್ ವೇಳೆ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತೇ ಎಂಬುದನ್ನು ತನಿಖೆಯ ಪ್ರಮುಖ ಅಂಶವನ್ನಾಗಿ ಪರಿಗಣಿಸಲಾಗಿದೆ.
ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಡಿ ಗ್ಯಾಸ್ ಸಿಲಿಂಡರ್ ಪೂರೈಕೆದಾರ ರಾಮು ಮತ್ತು ಉಸ್ತುವಾರಿ ಮೇಲ್ವಿಚಾರಕ ಆರ್ಮುಗಂ ಅವರನ್ನು ಬಂಧಿಸಲಾಗಿದೆ. ಸ್ಫೋಟದ ನಿಖರ ಕಾರಣ ಪತ್ತೆ ಹಚ್ಚಲು ತಜ್ಞರ ನೆರವಿನೊಂದಿಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಚಿತ್ರರಂಗದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿರುವ ಈ ಘಟನೆ ತಮಿಳು ಚಿತ್ರೋದ್ಯಮವನ್ನು ಬೆಚ್ಚಿಬೀಳಿಸಿದೆ.



