ಕಲಬುರಗಿ: ಕಾರಿನೊಳಗೆ ಸಿಲುಕಿ ಉಸಿರುಗಟ್ಟಿದ ಪರಿಣಾಮ ಮೂರು ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೊಟ್ಟುರೇಶ್ವರ ಅವರ ಪುತ್ರ ಬಸವಪ್ರಭು (3) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪೋಷಕರು ಮಗುವನ್ನು ಕರೆದುಕೊಂಡು ಶಾಲೆಗೆ ಕಾರಿನಲ್ಲಿ ತೆರಳಿದ್ದರು. ಶಾಲೆ ಬಳಿ ಕಾರನ್ನು ನಿಲ್ಲಿಸಿ ಹೊರಬಂದ ವೇಳೆ ವಾಹನವನ್ನು ಸಂಪೂರ್ಣ ಲಾಕ್ ಮಾಡದೆ ತೆರಳಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆಟವಾಡುತ್ತಿದ್ದ ಬಸವಪ್ರಭು ಕಾರಿನೊಳಗೆ ಪ್ರವೇಶಿಸಿದ್ದಾನೆ. ಬಳಿಕ ಆಕಸ್ಮಿಕವಾಗಿ ಕಾರಿನ ಬಾಗಿಲುಗಳು ಲಾಕ್ ಆಗಿದ್ದು, ಮಗು ವಾಹನದೊಳಗೆ ಸಿಲುಕಿಕೊಂಡಿದೆ. ಹೊರಬರಲು ಸಾಧ್ಯವಾಗದೇ ಕಾರಿನೊಳಗೆ ಬಹಳ ಸಮಯ ಕಳೆದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಮಗು ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು ಮತ್ತು ಕುಟುಂಬಸ್ಥರು ಬೆಳಗ್ಗೆಯಿಂದಲೇ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲಿಯೂ ಮಗು ಪತ್ತೆಯಾಗಿರಲಿಲ್ಲ.
ಮಧ್ಯಾಹ್ನದ ವೇಳೆಗೆ ಕಾರನ್ನು ಪರಿಶೀಲಿಸಿದಾಗ ಮಗುವು ಅದರೊಳಗೆ ಅಚೇತನ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಹೊರತೆಗೆದರೂ ಆಗಲೇ ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಶಹಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



