ಬೆಂಗಳೂರು: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ರಾಜಕೀಯ ತಾಪಮಾನ ಏರಿಕೆಯಾಗಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಅವರು ತಮ್ಮ ಸಚಿವ ಸ್ಥಾನ ತ್ಯಜಿಸಿದ ಬೆನ್ನಲ್ಲೇ, ಕೋರಮಂಗಲದಲ್ಲಿರುವ ಅವರ ಕಚೇರಿ ಎದುರು ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
‘ರಾಮಲಿಂಗಾ ರೆಡ್ಡಿಗೆ ಅನ್ಯಾಯವಾಗಿದೆ’ ಎಂದು ಘೋಷಣೆಗಳನ್ನು ಕೂಗಿದ ಬೆಂಬಲಿಗರು, ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಖಾತೆ ಬದಲಾವಣೆ ಮೂಲಕ ಹಿರಿಯ ನಾಯಕನಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ತೀವ್ರಗೊಂಡ ಸಂದರ್ಭದಲ್ಲಿ, ಕಾರ್ಯಕರ್ತರು ರಾಮಲಿಂಗಾ ರೆಡ್ಡಿ ಅವರ ಕಾರಿಗೆ ಅಡ್ಡಬಿದ್ದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತಳ್ಳಾಟ-ನೂಕಾಟ ಸಂಭವಿಸಿತು.
ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿದ್ದರೂ, ಬಳಿಕ ಪೊಲೀಸರು ಜನರನ್ನು ನಿಯಂತ್ರಿಸಿದರು. ರಾಜಕೀಯ ವಲಯದಲ್ಲಿ ಈ ಘಟನೆ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಒಳಗಿನ ಅಸಮಾಧಾನ ಮತ್ತೆ ಬಹಿರಂಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.



