ಕೊಡಗು: ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ವನ್ಯಜೀವಿ ದಾಳಿಗಳು ಗ್ರಾಮೀಣ ಪ್ರದೇಶಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ. ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿಯ ಪತ್ನಿ ಸಾವನ್ನಪ್ಪಿದರೆ, ಹಾಸನದಲ್ಲಿ ಚಿರತೆ ದಾಳಿಗೆ ನಾಲ್ವರು ಗಾಯಗೊಂಡಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿ ನಿವೃತ್ತ ಐಜಿಪಿ ಅಣ್ಣಳಮಾಡ ಸುನೀಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಮೇಲೆ ಕಾಡಾನೆ ದಾಳಿ ನಡೆಸಿದೆ. ಬೆಳಗ್ಗೆ ತಮ್ಮ ಖಾಸಗಿ ಎಸ್ಟೇಟ್ಗೆ ತೆರಳಿದ್ದ ವೇಳೆ ನಡೆದ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಲ ಕಾರ್ಮಿಕರು ಸಹ ಗಾಯಗೊಂಡಿದ್ದಾರೆ.
ಇನ್ನೊಂದೆಡೆ, ಹೊಳೆನರಸೀಪುರ ತಾಲೂಕಿನ ಅಂಕವಳ್ಳಿ ಗ್ರಾಮದಲ್ಲಿ ಚಿರತೆ ಏಕಾಏಕಿ ಜಮೀನಿಗೆ ನುಗ್ಗಿ ರೈತರ ಮೇಲೆ ದಾಳಿ ನಡೆಸಿದೆ. ನವೀನ್, ನಾಗರಾಜ್, ಜಯಮ್ಮ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಯ ಬಳಿಕ ಚಿರತೆ ಅಂಕವಳ್ಳಿಯಿಂದ ಬೂವನಹಳ್ಳಿ ಕಡೆಗೆ ತೆರಳಿ ಮತ್ತೋರ್ವ ಮಹಿಳೆ ವಸಂತಮ್ಮ ಅವರ ಮೇಲೂ ದಾಳಿ ನಡೆಸಿದೆ. ಗ್ರಾಮಸ್ಥರ ಗದ್ದಲದಿಂದ ಚಿರತೆ ಸಮೀಪದ ದನದ ಕೊಟ್ಟಿಗೆಯೊಳಗೆ ಸೇರಿಕೊಂಡಿದ್ದು, ಗ್ರಾಮಸ್ಥರು ಕೊಟ್ಟಿಗೆ ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮೈಸೂರಿನ ವನ್ಯಜೀವಿ ವೈದ್ಯ ಡಾ. ಆದರ್ಶ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆಹಿಡಿಯುವ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ ಲತಾ ಕುಮಾರಿ, ಚಿರತೆ ಇರುವ ಸ್ಥಳವನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.



