ಮುಂಬೈ: ಐಪಿಎಲ್ ಸ್ಥಾಪಕ ಲಲಿತ್ ಮೋದಿ ಅವರ ಜೀವನ ಚರಿತ್ರೆ ಆಧಾರಿತ ಬಹುನಿರೀಕ್ಷಿತ ಬಯೋಪಿಕ್ ನಿರ್ಮಾಣಕ್ಕೆ ವೇಗ ಸಿಕ್ಕಿದ್ದು, ಚಿತ್ರದ ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದತ್ತ ಸಾಗುತ್ತಿದೆ. ಈ ಬಗ್ಗೆ ಸ್ವತಃ ಲಲಿತ್ ಮೋದಿ ಮಾಹಿತಿ ನೀಡಿದ್ದು, ತಮ್ಮ ಪಾತ್ರದಲ್ಲಿ ನಟಿಸಲು ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಆಸಕ್ತಿ ವ್ಯಕ್ತಪಡಿಸಿದ್ದ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ.
ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಲಿತ್ ಮೋದಿ, “ನನ್ನ ಜೀವನ ಆಧಾರಿತ ಸಿನಿಮಾ ಸಿದ್ಧವಾಗುತ್ತಿದೆ. ಸ್ಕ್ರಿಪ್ಟಿಂಗ್ ಕೆಲಸ ಪ್ರಗತಿಯಲ್ಲಿದೆ. ಯೋಜನೆಗಾಗಿ ಈಗಾಗಲೇ ನೂರಾರು ಸಂದರ್ಶನಗಳನ್ನು ನಡೆಸಲಾಗಿದೆ. ಸ್ನೇಹಾ ರಜನಿ ನೇತೃತ್ವದ ತಂಡ ಕಥೆ ಮತ್ತು ಚಿತ್ರಕಥೆ ಅಭಿವೃದ್ಧಿಪಡಿಸುತ್ತಿದೆ” ಎಂದು ತಿಳಿಸಿದ್ದಾರೆ.
ಬಯೋಪಿಕ್‌ನಲ್ಲಿ ತಮ್ಮ ಪಾತ್ರಕ್ಕೆ ಸೂಕ್ತ ನಟ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ರಣವೀರ್ ಸಿಂಗ್ ಎರಡು ವರ್ಷಗಳ ಹಿಂದೆ ಲಂಡನ್‌ಗೆ ಬಂದು ನನ್ನನ್ನು ಭೇಟಿಯಾಗಿದ್ದರು. ನನ್ನ ಜೀವನ ಮತ್ತು ಐಪಿಎಲ್ ನಿರ್ಮಾಣದ ಹಿಂದಿನ ಕಥೆಯನ್ನು ಅರ್ಥಮಾಡಿಕೊಳ್ಳಲು ಅವರು ವಿಶೇಷ ಆಸಕ್ತಿ ತೋರಿದ್ದರು” ಎಂದು ಹೇಳಿದ್ದಾರೆ.
“ತಮ್ಮ ಸಿನಿ ಜೀವನದಲ್ಲಿ ಯಾವಾಗಲಾದರೂ ಐತಿಹಾಸಿಕ ವ್ಯಕ್ತಿಯ ಪಾತ್ರ ಮಾಡಬೇಕಾದರೆ ಅದು ಲಲಿತ್ ಮೋದಿ ಪಾತ್ರವಾಗಿರಬೇಕು ಎಂದು ರಣವೀರ್ ಹೇಳಿದ್ದರು. ಅವರು ನನ್ನ ಪಾತ್ರವನ್ನು ಅಭಿನಯಿಸಲು ಬಯಸಿದ್ದರು. ರಣವೀರ್ ಒಬ್ಬ ಅದ್ಭುತ ಕಲಾವಿದ” ಎಂದು ಮೋದಿ ಪ್ರಶಂಸಿಸಿದ್ದಾರೆ.
ಆದರೆ, ಪ್ರಸ್ತುತ ರಣವೀರ್ ಸಿಂಗ್ ಅವರ ಬ್ಯುಸಿ ಶೆಡ್ಯೂಲ್ ಹಿನ್ನೆಲೆಯಲ್ಲಿ ಅವರು ಈ ಪ್ರಾಜೆಕ್ಟ್‌ನಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಮೂಲಕ ಕ್ರಿಕೆಟ್ ಉದ್ಯಮಕ್ಕೆ ಹೊಸ ಆಯಾಮ ನೀಡಿದ ಲಲಿತ್ ಮೋದಿ ಅವರ ಜೀವನದ ಏರಿಳಿತಗಳು, ವಿವಾದಗಳು, ಯಶಸ್ಸು ಹಾಗೂ ಜಾಗತಿಕ ಮಟ್ಟದ ಕ್ರಿಕೆಟ್ ಬ್ರ್ಯಾಂಡ್ ನಿರ್ಮಾಣದ ಕಥೆಯನ್ನು ಈ ಬಯೋಪಿಕ್ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಚಿತ್ರದ ನಿರ್ದೇಶಕ ಹಾಗೂ ಉಳಿದ ತಾರಾಗಣದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.



