ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರೊಬ್ಬರ ವಿರುದ್ಧ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ವಿಶ್ವವಿದ್ಯಾಲಯ ಆಡಳಿತದ ಗಮನ ಸೆಳೆದಿದೆ.
ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜ ತಂಗುದೊರೈ ವಿರುದ್ಧ ಪಿಎಚ್‌ಡಿ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು, ತಮ್ಮ ಮಾರ್ಗದರ್ಶಕರಿಂದ ನಿರಂತರ ಕಿರುಕುಳ ಮತ್ತು ಒತ್ತಡ ಎದುರಿಸಬೇಕಾಯಿತು ಎಂದು ಆರೋಪಿಸಿದ್ದಾರೆ. ದೂರುದಾರರ ಪ್ರಕಾರ, ಹಿಂದೆ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳೊಂದಿಗೆ ಪ್ರಾಧ್ಯಾಪಕರು ವೈಯಕ್ತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಆ ವಿದ್ಯಾರ್ಥಿನಿ ವ್ಯಾಸಂಗವನ್ನು ಅರ್ಧದಲ್ಲೇ ನಿಲ್ಲಿಸಿ ತೆರಳಿದ ಬಳಿಕ, ಆಕೆಯನ್ನು ಮತ್ತೆ ಸಂಪರ್ಕಿಸುವಂತೆ ಮತ್ತು ಕರೆಸುವಂತೆ ತಮ್ಮ ಮೇಲೆ ಒತ್ತಡ ಹೇರಲಾಗಿದೆ ಎಂದು ಪಿಎಚ್‌ಡಿ ವಿದ್ಯಾರ್ಥಿ ವೇದವ್ಯಾಸ್ ಚೌಹಾಣ್ ಆರೋಪಿಸಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಸಂಶೋಧನಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ವಿದ್ಯಾರ್ಥಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಗಳಿಗೆ ದೂರು ಸಲ್ಲಿಸಿದ್ದು, ಕೆಲವು ಆಡಿಯೋ ಮತ್ತು ಇತರ ದಾಖಲೆಗಳನ್ನೂ ಒದಗಿಸಿರುವುದಾಗಿ ತಿಳಿದುಬಂದಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಧ್ಯಾಪಕ ದೇವರಾಜ ತಂಗುದೊರೈ, “ಇದು ಅಕಾಡೆಮಿಕ್ ವಿಷಯವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.
ಪ್ರಕರಣ ಇದೀಗ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಆಡಳಿತ ತೀರ್ಮಾನ ಕೈಗೊಳ್ಳಬೇಕಿದೆ. ವಿದ್ಯಾರ್ಥಿ ಸಂಘಟನೆಗಳು ಮಾತ್ರ ಪ್ರಕರಣದ ಸಮಗ್ರ ತನಿಖೆ ನಡೆಸಿ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿವೆ.



