ಬೆಂಗಳೂರು: ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಜಿಲ್ಲಾ ಪಂಚಾಯಿತಿ (ಜಿ.ಪಂ) ಹಾಗೂ ತಾಲೂಕು ಪಂಚಾಯಿತಿ (ತಾ.ಪಂ) ಚುನಾವಣೆ ನಡೆಸುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬಕ್ಕೆ ರಾಜ್ಯ ಸರ್ಕಾರ ಹೈಕೋರ್ಟ್ ಎದುರು ಕ್ಷಮೆಯಾಚಿಸಿದ್ದು, ಕ್ಷೇತ್ರಗಳ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 8 ವಾರಗಳ ಕಾಲಾವಕಾಶ ಕೋರಿದೆ.
ಈ ಸಂಬಂಧ ರಾಜ್ಯ ಚುನಾವಣಾ ಆಯೋಗವು ಸರ್ಕಾರದ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.
ರಾಜ್ಯ ಸರ್ಕಾರವು 2023ರ ಡಿಸೆಂಬರ್ 19ರಂದು ಹೈಕೋರ್ಟ್‌ಗೆ ಲಿಖಿತ ಭರವಸೆ ನೀಡಿ, 12 ವಾರಗಳೊಳಗೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿತ್ತು. ಆದರೆ, ಆ ಭರವಸೆಯನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗವು 2024ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ ವಿಳಂಬದ ಕಾರಣಗಳನ್ನು ವಿವರಿಸಿದರು.
ಪ್ರಮಾಣಪತ್ರದಲ್ಲಿ, ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ ಹಾಗೂ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವ ಉದ್ದೇಶವೂ ಇರಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ, ಪ್ರಕ್ರಿಯೆ ವಿಳಂಬಗೊಂಡಿರುವುದಕ್ಕೆ ಸರ್ಕಾರದ ಪರವಾಗಿ ಕ್ಷಮೆಯಾಚಿಸಲಾಗಿದೆ.
ಕಂದಾಯ ಇಲಾಖೆಯು ವಿಜಯಪುರ ಜಿಲ್ಲೆಯ ನಾಲ್ಕು ತಾಲೂಕುಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಕೆಲವು ತಾಲೂಕುಗಳ ಗಡಿಗಳನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿದ್ದರಿಂದ, ಆ ಭಾಗಗಳ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವ ಅಗತ್ಯ ಎದುರಾಯಿತು ಎಂದು ಸರ್ಕಾರ ತಿಳಿಸಿದೆ.
ಈ ಪೈಕಿ ವಿಜಯಪುರ ಜಿಲ್ಲೆಯ ನಾಲ್ಕು ತಾಲೂಕುಗಳ ಕ್ಷೇತ್ರ ಮರುನಿಗದಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಆದರೆ ಬಾಗಲಕೋಟೆ ಜಿಲ್ಲೆಯ ತಾಲೂಕುಗಳ ಗಡಿ ಮರುನಿಗದಿ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ 12 ವಾರಗಳ ಅವಧಿ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.
ಇನ್ನುಳಿದ ಜಿಲ್ಲೆಗಳ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಪೂರ್ಣಗೊಂಡಿದ್ದು, ಅವುಗಳಿಗೆ ಮೀಸಲಾತಿ ನಿಗದಿಪಡಿಸಲು 8 ವಾರಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ.
ಸರ್ಕಾರದ ಈ ಮನವಿಯನ್ನು ದಾಖಲಿಸಿಕೊಂಡ ಹೈಕೋರ್ಟ್ ವಿಭಾಗೀಯ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.



