ನವದೆಹಲಿ: ಲಂಡನ್ನಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಭಾಷಣದ ವೇಳೆ ಕೆಲವರು ಗದ್ದಲ ಸೃಷ್ಟಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದೆ.
ಜೂನ್ 4ರಂದು ಲಂಡನ್ನ ಬರ್ಕ್ಬೆಕ್ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಅಂತರರಾಷ್ಟ್ರೀಯ ಕಾನೂನು’ ವಿಷಯದ ಕುರಿತು ಸೂರ್ಯ ಕಾಂತ್ ಉಪನ್ಯಾಸ ನೀಡುತ್ತಿದ್ದರು. ಭಾಷಣದ ಬಳಿಕ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಕೆಲವರು ವಿಷಯಕ್ಕೆ ಸಂಬಂಧಿಸದ ಪ್ರಶ್ನೆಗಳನ್ನು ಕೇಳಲು ಮುಂದಾದರು. ಭಾರತದಲ್ಲಿ ವಿರೋಧದ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಗಳನ್ನು ಮುಂದಿಟ್ಟು ಚರ್ಚೆ ಆರಂಭಿಸಲು ಯತ್ನಿಸಿದರು.
ಈ ವೇಳೆ ಕಾರ್ಯಕ್ರಮದ ನಿರೂಪಕರು ಮಧ್ಯಪ್ರವೇಶಿಸಿ, ಪ್ರಶ್ನೆಗಳು ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿ ಚರ್ಚೆಯನ್ನು ಸ್ಥಗಿತಗೊಳಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಭಾರತೀಯ ಹೈಕಮಿಷನ್, ಗೌರವಾನ್ವಿತ ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ವರ್ತನೆ ಒಪ್ಪಲಾಗದು ಎಂದು ಹೇಳಿದೆ. ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದ್ದರೂ, ಅದು ಶಾಂತಿಯುತ ಮತ್ತು ಸಭ್ಯ ರೀತಿಯಲ್ಲಿರಬೇಕು ಎಂದು ಸೂಚಿಸಿದೆ.
ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಸೂರ್ಯ ಕಾಂತ್ ಅವರು, ಕೃತಕ ಬುದ್ಧಿಮತ್ತೆ ನ್ಯಾಯಾಂಗ, ಆಡಳಿತ ಹಾಗೂ ಜಾಗತಿಕ ವ್ಯವಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಆದರೆ ತಂತ್ರಜ್ಞಾನವು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಮಾನವ ಘನತೆಯ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದ್ದರು.



