ಚೆನ್ನೈ: ತಮಿಳುನಾಡು ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿದ್ದು, ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪಕ್ಷ ತೊರೆದ ಬೆನ್ನಲ್ಲೇ ಮತ್ತಿಬ್ಬರು ಪ್ರಮುಖ ನಾಯಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಹಾಗೂ ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ತಮ್ಮ ಸ್ಥಾನಗಳಿಂದ ಕೆಳಗಿಳಿದಿದ್ದಾರೆ.
ರಾಜೀನಾಮೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುಮತಿ ವೆಂಕಟೇಶ್, ಭಾರವಾದ ಹೃದಯದಿಂದ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದರ ಜೊತೆಗೆ ಪಕ್ಷದೊಂದಿಗಿನ ತಮ್ಮ ಸಂಬಂಧವನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಬಿಜೆಪಿಯ ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಮತ್ತು ರಾಷ್ಟ್ರಸೇವೆಯ ಆದರ್ಶಗಳಿಂದ ಸದಾ ಪ್ರೇರಿತರಾಗಿದ್ದೇನೆ ಎಂದು ಹೇಳಿದ್ದಾರೆ. ಇದೇ ಮೌಲ್ಯಗಳು ತಮ್ಮ ರಾಜಕೀಯ ಪಯಣಕ್ಕೆ ಮಾರ್ಗದರ್ಶಕವಾಗಿದ್ದು, ಮುಂದೆಯೂ ಅವುಗಳನ್ನು ಪಾಲಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜೀನಾಮೆ ನಿರ್ಧಾರವನ್ನು ಸಾಕಷ್ಟು ಚಿಂತನೆಯ ಬಳಿಕ ಕೈಗೊಂಡಿರುವುದಾಗಿ ತಿಳಿಸಿರುವ ಸುಮತಿ ವೆಂಕಟೇಶ್, ಪಕ್ಷದಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಬೆಂಬಲ, ಮಾರ್ಗದರ್ಶನ ಮತ್ತು ಸಹಕಾರ ನೀಡಿದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಪಕ್ಷದ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಅಣ್ಣಾಮಲೈ ಅವರ ನಿರ್ಗಮನದ ಕುರಿತು ಪ್ರತಿಕ್ರಿಯಿಸಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, ಯಾವುದೇ ಒಬ್ಬ ವ್ಯಕ್ತಿಯ ನಿರ್ಗಮನದಿಂದ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲ ಎಂದು ಹೇಳಿದ್ದರು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿ ತನ್ನ ಸಿದ್ಧಾಂತಗಳಲ್ಲಿ ದೃಢವಾಗಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.



