ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರ ಯುಗ್ ದೇವಗನ್ ತಮ್ಮ ಫಿಟ್ನೆಸ್ ಟ್ರಾನ್ಸ್ಫಾರ್ಮೇಶನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಜಿಮ್ನಲ್ಲಿ ಬೆವರು ಸುರಿಸುತ್ತಿರುವ ಅವರ ಹೊಸ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಯುಗ್ ದೇವಗನ್ ಕಠಿಣ ವರ್ಕೌಟ್ ಹಾಗೂ ಪುಷ್-ಅಪ್ಸ್ಗಳನ್ನು ಮಾಡುತ್ತಿರುವುದು ಕಾಣಿಸುತ್ತದೆ. ಫಿಟ್ನೆಸ್ ಪ್ರಯಾಣದ ಆರಂಭದಿಂದ ಇಂದಿನವರೆಗಿನ ದೇಹದ ಬದಲಾವಣೆಯನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಅವರ ಪರಿಶ್ರಮ ಮತ್ತು ಶಿಸ್ತಿನ ಜೀವನಶೈಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ವಿಡಿಯೋ ಹಂಚಿಕೊಂಡಿರುವ ಫಿಟ್ನೆಸ್ ಕೋಚ್ ರಾಬಿನ್ ಬಹ್ಲ್, ‘ಯುಗ್ ಜಿಮ್ನಲ್ಲಿ ಅತ್ಯಂತ ಸಮರ್ಪಣೆಯಿಂದ ತರಬೇತಿ ಪಡೆಯುವ ಹುಡುಗ. ಅವನ ಬದ್ಧತೆ ಮತ್ತು ಬೆಳವಣಿಗೆ ಪ್ರತಿದಿನವೂ ಹೊಸ ಪ್ರೇರಣೆ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಕಾಜೋಲ್ ಕೂಡ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿ ಫೈರ್ ಎಮೋಜಿ ಪೋಸ್ಟ್ ಮಾಡಿದ್ದು, ಮಗನ ಸಾಧನೆಗೆ ಬೆಂಬಲ ಸೂಚಿಸಿದ್ದಾರೆ.
ಗ್ಲಾಮರ್ ಪ್ರಪಂಚದಿಂದ ದೂರ ಉಳಿಯಲು ಇಷ್ಟಪಡುವ ಯುಗ್, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಈಗಾಗಲೇ ‘ಕರಾಟೆ ಕಿಡ್: ಲೆಜೆಂಡ್ಸ್’ ಚಿತ್ರದ ಹಿಂದಿ ಆವೃತ್ತಿಗೆ ಧ್ವನಿ ನೀಡುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಸದ್ಯ ಫಿಟ್ನೆಸ್, ವಿದ್ಯಾಭ್ಯಾಸ ಮತ್ತು ಡಬ್ಬಿಂಗ್ ಕೆಲಸಗಳ ನಡುವೆ ಸಮತೋಲನ ಸಾಧಿಸುತ್ತಿರುವ ಯುಗ್ ದೇವಗನ್, ಭವಿಷ್ಯದಲ್ಲಿ ಬಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆಯೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.



