ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮುಂಗಾರು ವಿಳಂಬದಿಂದ ಆತಂಕಗೊಂಡಿರುವ ರೈತರು ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ವರುಣ ದೇವರ ಕೃಪೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ದುರ್ಗಾದೇವಿ ಕೆರೆಯ ದಂಡೆಯಲ್ಲಿ ಮಣ್ಣಿನಿಂದ ಈಶ್ವರ ಲಿಂಗ ಹಾಗೂ ಬಸವಣ್ಣನ ಮೂರ್ತಿ ನಿರ್ಮಿಸಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಷಡಕ್ಷರಯ್ಯ ಬದ್ದಿಮಠ ಅವರು ಮಂತ್ರಘೋಷಗಳೊಂದಿಗೆ ಪೂಜಾ ವಿಧಿವಿಧಾನ ನಡೆಸಿಕೊಟ್ಟರು.
ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಭಕ್ತಿಭಾವದಿಂದ ಪೂಜೆಯಲ್ಲಿ ಭಾಗವಹಿಸಿ ವರುಣ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವೂ ನಡೆಯಿತು.
ಇದಕ್ಕೂ ಮೊದಲು ಗ್ರಾಮ ಪಂಚಾಯಿತಿ ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ವಿಶೇಷ ಪೂಜೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿತ್ತು.
ಗ್ರಾಮದ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿದು ಬಿತ್ತನೆ ಕಾರ್ಯ ಆರಂಭವಾಗಿದ್ದರೂ, ಲಕ್ಕುಂಡಿಯಲ್ಲಿ ಇನ್ನೂ ಮಳೆಯಾಗದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರೈತರಾದ ಪ್ರಭು ಕುಂಬಾರ, ಶಿವಪ್ಪ ಬಿನ್ನಾಳ, ಅಜ್ಜಪ್ಪ ಕವಲೂರು, ಬಸವರಾಜ ಹಣವಾಳ, ಈಶಪ್ಪ ಕುಂಬಾರ ಹಾಗೂ ಬಸಯ್ಯ ನರಗುಂದಮಠ ತಿಳಿಸಿದರು.



