ಬೆಂಗಳೂರು: ಮರಣಶಯ್ಯೆಯಲ್ಲಿರುವ 97 ವರ್ಷದ ತಾತನನ್ನು ಭೇಟಿ ಮಾಡಿ ಕೊನೆಯ ಕ್ಷಣಗಳಲ್ಲಿ ಆರೈಕೆ ಮಾಡುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರಿಗೆ ಕರ್ನಾಟಕ ಹೈಕೋರ್ಟ್ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎನ್.ಡಿ. ನವೀನ್ ಅಲಿಯಾಸ್ ಸಬ್ಸಿಡಿ ನವೀನ್ ಅವರಿಗೆ ಪೆರೋಲ್ ನೀಡುವಂತೆ ಅವರ ತಂದೆ ಎನ್.ಎನ್. ದೇವರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಪ್ರಕರಣದ ಪರಿಸ್ಥಿತಿಯನ್ನು ಪರಿಗಣಿಸಿ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿ ಆದೇಶ ಹೊರಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕೊಲೆ ಪ್ರಕರಣದಲ್ಲಿ ನವೀನ್ ಅವರಿಗೆ 2024ರ ಡಿಸೆಂಬರ್ 18ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವರು 2022ರ ಅಕ್ಟೋಬರ್ 2ರಿಂದ ಜೈಲಿನಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪ್ರಸ್ತುತ ಅವರ 97 ವರ್ಷದ ತಾತ ಗಂಭೀರ ಅನಾರೋಗ್ಯದಿಂದ ಮರಣಶಯ್ಯೆಯಲ್ಲಿದ್ದು, ಅವರನ್ನು ಭೇಟಿ ಮಾಡಲು ಪೆರೋಲ್ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಈ ಹಿಂದೆ ನವೀನ್ ಅವರಿಗೆ ಮೂರು ಬಾರಿ ಪೆರೋಲ್ ಮಂಜೂರಾಗಿದ್ದು, ಎಲ್ಲ ಸಂದರ್ಭಗಳಲ್ಲೂ ಅವರು ವಿಧಿಸಲಾದ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪೆರೋಲ್ ಅವಧಿ ಪೂರ್ಣಗೊಂಡ ಕೂಡಲೇ ಅವರು ಜೈಲಿಗೆ ಶರಣಾಗಿದ್ದು, ಯಾವುದೇ ನಿಯಮ ಉಲ್ಲಂಘನೆಯೂ ನಡೆದಿಲ್ಲ ಎಂದು ವಿವರಿಸಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠ, ಮಾನವೀಯ ನೆಲೆಯಲ್ಲಿ ನವೀನ್ ಅವರಿಗೆ 15 ದಿನಗಳ ತುರ್ತು ಪೆರೋಲ್ ಮಂಜೂರು ಮಾಡಿತು.
ಆದರೆ, ಪೆರೋಲ್ ಅವಧಿಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ವಾರಕ್ಕೊಮ್ಮೆ ಸಂಬಂಧಿತ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ಪೆರೋಲ್ ಅವಧಿಯಲ್ಲಿ ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು ಹಾಗೂ ಅವಧಿ ಮುಗಿದ ಕೂಡಲೇ ಜೈಲಿಗೆ ಮರಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.



