ಹುಬ್ಬಳ್ಳಿ: ಗುರು-ಶಿಷ್ಯ ಸಂಬಂಧಕ್ಕೆ ಭಾವನಾತ್ಮಕ ಉದಾಹರಣೆಯೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಬಾಲ್ಯದಲ್ಲಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಯೊಬ್ಬರು ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ ಘಟನೆ ಎಲ್ಲರ ಗಮನ ಸೆಳೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ನ ಕುಮಾರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರಿಗೆ ಅವರ ಹಳೆಯ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ಅವರು ಮಾರುತಿ ಸುಜುಕಿ ಸ್ವಿಫ್ಟ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.
2007ರ ಎಸ್ಎಸ್ಎಲ್ಸಿ ಬ್ಯಾಚ್ನ ವಿದ್ಯಾರ್ಥಿಯಾಗಿದ್ದ ನವೀನ್, ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾಗ ಶಿಕ್ಷಕ ವಸ್ತ್ರದ್ ಅವರು ಶಾಲಾ ಶುಲ್ಕ ಪಾವತಿಸಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದರು. ಜೊತೆಗೆ ರಜಾ ದಿನಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಿ ಅವರ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದ್ದರು ಎಂದು ತಿಳಿದುಬಂದಿದೆ.
ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನವೀನ್, ತಮ್ಮ ಜೀವನ ರೂಪಿಸಿದ ಗುರುಗಳ ಋಣ ತೀರಿಸುವ ಉದ್ದೇಶದಿಂದ ಈ ಉಡುಗೊರೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆದ ಸಮಾರಂಭದಲ್ಲಿ ಕಾರಿನ ಕೀ ಹಸ್ತಾಂತರಿಸಲಾಯಿತು.
ಅನಿರೀಕ್ಷಿತ ಉಡುಗೊರೆಯಿಂದ ಭಾವುಕರಾದ ಶಿಕ್ಷಕ ವಸ್ತ್ರದ್ ಅವರು ತಮ್ಮ ಶಿಷ್ಯನ ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಗುರು-ಶಿಷ್ಯ ಬಾಂಧವ್ಯಕ್ಕೆ ಮಾದರಿಯಾದ ಈ ಘಟನೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.



