ಮಂಡ್ಯ: ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿದ ಪರಿಣಾಮ ಹಿನ್ನೀರಿನಲ್ಲಿ ಮುಳುಗಿದ್ದ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಮತ್ತೆ ಗೋಚರಿಸಿದ್ದು, ಪ್ರವಾಸಿಗರ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ.
ಮಂಡ್ಯ ಜಿಲ್ಲೆಯ ಬೋರೆಆನಂದೂರು ಸಮೀಪ ಇರುವ ಈ ಪುರಾತನ ದೇವಾಲಯ ಹಲವು ವರ್ಷಗಳಿಂದ ಜಲಾಶಯದ ನೀರಿನ ಅಡಿಯಲ್ಲಿ ಇತ್ತು. ಇದೀಗ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 81 ಅಡಿಗೆ ಇಳಿದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಕಟ್ಟಡ ಸಂಪೂರ್ಣವಾಗಿ ಕಾಣಿಸಿಕೊಂಡಿದೆ.
ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ದೇವಾಲಯದ ಮೂರ್ತಿಯನ್ನು ಸುರಕ್ಷಿತವಾಗಿ ಮಜ್ಜಿಗೆಪುರಕ್ಕೆ ಸ್ಥಳಾಂತರಿಸಲಾಗಿದ್ದರೂ, ಮೂಲ ಕಟ್ಟಡವನ್ನು ಸ್ಥಳಾಂತರಿಸಿರಲಿಲ್ಲ. ಹೀಗಾಗಿ ನೀರಿನ ಮಟ್ಟ ಇಳಿದಾಗಲೆಲ್ಲ ಈ ದೇವಾಲಯ ಮತ್ತೆ ಕಾಣಿಸಿಕೊಳ್ಳುತ್ತದೆ.
ದೇವಸ್ಥಾನ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಫೋಟೋಶೂಟ್ ಹಾಗೂ ವಿಡಿಯೋ ಚಿತ್ರೀಕರಣವೂ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳದ ದೃಶ್ಯಗಳು ವೈರಲ್ ಆಗುತ್ತಿರುವುದರಿಂದ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.



