ಶಿವಮೊಗ್ಗ: ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್‌ನಲ್ಲಿ ನಡೆದಿದೆ.
ರೌಡಿಶೀಟರ್ ನರಸಿಂಹ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಅವರ ಮೇಲೆ ಆರೋಪಿ ಮಧು ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಮೊದಲು ಎಚ್ಚರಿಕೆಗಾಗಿ ಏರ್ ಫೈರ್ ಮಾಡಿದ್ದಾರೆ. ಆದರೆ ಆರೋಪಿ ಮಾತು ಕೇಳದ ಹಿನ್ನೆಲೆಯಲ್ಲಿ ಕೋಟೆ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿಗೆ ಒಳಗಾದ ಆರೋಪಿ ಮಧು ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ ಶಿವಮೊಗ್ಗದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹನನ್ನು ಎದುರಾಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಪೊಲೀಸರು ಮಧು ಸೇರಿದಂತೆ ಐವರನ್ನು ಬಂಧಿಸಿದ್ದರು.



