ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಹಂಚಿಕೆ ವಿಚಾರ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಸಚಿವ ಎಚ್.ಕೆ. ಪಾಟೀಲರು ತ್ಯಾಗದ ಮನೋಭಾವ ಪ್ರದರ್ಶಿಸಿ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಈರಣ್ಣ ಶೆಟ್ಟರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆ ರಾಜ್ಯದಲ್ಲಿಯೇ ಶಿಸ್ತಿನ ಕಾಂಗ್ರೆಸ್ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಗೆ ಸಂಬಂಧಿಸಿದ ಬೆಳವಣಿಗೆಗಳು ಜಿಲ್ಲೆಯ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ ಎಂದು ಹೇಳಿದರು.
ಎಚ್.ಕೆ. ಪಾಟೀಲರು ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿಯುತ್ತಿರುವ ಜಿ.ಎಸ್. ಪಾಟೀಲರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪಕ್ಷದ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಸತತ ಎಂಟು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ನಾಯಕರಾಗಿದ್ದಾರೆ ಎಂದು ವಿವರಿಸಿದರು.
ಇಂತಹ ಅನುಭವೀ ನಾಯಕನಿಗೆ ಸಚಿವ ಸ್ಥಾನ ನೀಡುವುದರಿಂದ ಪಕ್ಷದ ಸಂಘಟನೆಗೆ ಹೊಸ ಶಕ್ತಿ ದೊರೆಯಲಿದೆ. ಅಲ್ಲದೆ, ಪಕ್ಷಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕರಿಗೆ ನ್ಯಾಯ ದೊರೆತಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಅಸಮಾಧಾನದ ವಾತಾವರಣ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಎಚ್.ಕೆ. ಪಾಟೀಲರು ದೊಡ್ಡ ಮನಸ್ಸು ಮಾಡಿ, ತಮ್ಮ ಸಹೋದ್ಯೋಗಿ ಜಿ.ಎಸ್. ಪಾಟೀಲರಿಗೆ ಅವಕಾಶ ಕಲ್ಪಿಸಬೇಕು. ಇದರಿಂದ ಹಿರಿಯ ನಾಯಕರಿಗೆ ಗೌರವ ದೊರೆಯುವುದರ ಜೊತೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಲಿದೆ ಎಂದು ಶೆಟ್ಟರ್ ಹೇಳಿದರು.
“ನಾಲ್ಕು ದಶಕಗಳಿಂದ ಪಕ್ಷ ಕಟ್ಟಿದ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲಾ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಲಿದೆ. ಪಕ್ಷದ ಹಿತದೃಷ್ಟಿಯಿಂದ ಎಚ್.ಕೆ. ಪಾಟೀಲರು ದೊಡ್ಡ ಮನಸ್ಸು ಮಾಡಬೇಕು.”
ಈರಣ್ಣ ಶೆಟ್ಟರ್, ಕಾಂಗ್ರೆಸ್ ಮುಖಂಡ



