HomeGadag Newsಸಾವಯವ ಕೃಷಿಯತ್ತ ತಿರುಗದಿದ್ದರೆ ಭೂಮಿ ಬರಡಾಗುತ್ತದೆ: ಸದಾನಂದಗೌಡ ಎಚ್ಚರಿಕೆ

ಸಾವಯವ ಕೃಷಿಯತ್ತ ತಿರುಗದಿದ್ದರೆ ಭೂಮಿ ಬರಡಾಗುತ್ತದೆ: ಸದಾನಂದಗೌಡ ಎಚ್ಚರಿಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಕೃಷಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬರಡಾಗುತ್ತಿದೆ. ರೈತರು ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರಿಸಿ, ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕರೆ ನೀಡಿದರು.

ತಾಲೂಕಿನ ಕಡಕೋಳ ಗ್ರಾಮದ ದೇವರಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಯವ ಕೃಷಿ ಪದ್ಧತಿಯು ಮಣ್ಣಿನ ಆರೋಗ್ಯ ಸುಧಾರಿಸುವುದರ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ದೀರ್ಘಕಾಲಿಕ ಕೃಷಿ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಗೋಮಯ, ಕಾಂಪೋಸ್ಟ್, ಹಸಿರು ಗೊಬ್ಬರ ಸೇರಿದಂತೆ ವಿವಿಧ ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾವಯವ ಕೃಷಿಯಿಂದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚುವುದರೊಂದಿಗೆ ಸಾವಯವ ಕಾರ್ಬನ್ ಪ್ರಮಾಣವೂ ವೃದ್ಧಿಯಾಗುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಉತ್ಪಾದನೆ, ಆರೋಗ್ಯಕರ ಆಹಾರ ಹಾಗೂ ದೀರ್ಘಾವಧಿಯಲ್ಲಿ ಕೃಷಿ ವೆಚ್ಚದ ಇಳಿಕೆಗೆ ಸಹ ನೆರವಾಗುತ್ತದೆ ಎಂದು ವಿವರಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಮಣ್ಣಿನಲ್ಲಿ ಶೇ.45ರಷ್ಟು ಖನಿಜಾಂಶ, ಶೇ.25ರಷ್ಟು ಗಾಳಿ, ಶೇ.25ರಷ್ಟು ನೀರು ಹಾಗೂ ಶೇ.5ರಷ್ಟು ಸಾವಯವ ಅಂಶಗಳಿದ್ದು, ಈ ಸಾವಯವ ಅಂಶಗಳೇ ಕೃಷಿಗೆ ಜೀವಾಳವಾಗಿವೆ ಎಂದರು.

ಭೂಮಿಯ ಮೇಲ್ಭಾಗದ ಒಂದು ಅಡಿ ಮಣ್ಣು ಮಾತ್ರ ಕೃಷಿಗೆ ಯೋಗ್ಯವಾಗಿದ್ದು, ಅದನ್ನು ಸಂರಕ್ಷಿಸುವುದು ರೈತರ ಜವಾಬ್ದಾರಿಯಾಗಿದೆ. ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ನಿರಂತರವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿದರೆ ಮಣ್ಣಿನ ಆರೋಗ್ಯ ಹದಗೆಡುತ್ತದೆ. ಮಣ್ಣು ಪರೀಕ್ಷೆಯ ವರದಿಯನ್ನು ಆಧರಿಸಿ ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ತ್ಯಾಜ್ಯ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಪಂಚಗವ್ಯ, ಜೀವಾಮೃತ, ಜೈವಿಕ ಗೊಬ್ಬರ ಹಾಗೂ ಬೆಳೆ ಹೊದಿಕೆಗಳ ಬಳಕೆಯೊಂದಿಗೆ ಸಮಗ್ರ ಪೋಷಕಾಂಶ ನಿರ್ವಹಣೆ ಅಳವಡಿಸಿಕೊಂಡರೆ ಮಾತ್ರ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅತಿಯಾದ ಅಥವಾ ತಪ್ಪಾದ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳ ಸಮತೋಲನ ಹಾಳಾಗುತ್ತದೆ. ಜೊತೆಗೆ ಉಪಯುಕ್ತ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಇದರಿಂದ ಭೂಮಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಫಕ್ಕೀರೇಶ ರಟ್ಟಿಹಳ್ಳಿ, ಬಸವರಾಜ ನಾವಿ, ಸುನೀಲ ಮಹಾಂತಶೆಟ್ಟರ, ಡಿ.ವೈ. ಹುನಗುಂದ, ಶಿವಪ್ರಕಾಶ ಮಹಾಜನಶೆಟ್ಟರ, ದೇವರಡ್ಡಿ ಅಗಸನಕೊಪ್ಪ, ಸರೋಜಮ್ಮ ಅಗಸನಕೊಪ್ಪ, ಸುರೇಶ ಕುಂಬಾರ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

“ರಾಸಾಯನಿಕ ಗೊಬ್ಬರದ ಅತಿಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದೆ. ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಮಾತ್ರ ಭೂಮಿಯ ಫಲವತ್ತತೆ ಉಳಿಯಲಿದೆ.”

ಡಿ.ವಿ. ಸದಾನಂದಗೌಡ

ಮಾಜಿ ಮುಖ್ಯಮಂತ್ರಿ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!