ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಅವರ ಅಭಿಮಾನಿ ಬಳಗದ ವತಿಯಿಂದ ತುಮಕೂರಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ತುಮಕೂರಿನ ಸಿದ್ಧಗಂಗಾ ಮಠದಿಂದ ಮಂಗಳವಾರ ಆರಂಭವಾಗಲಿರುವ ಪಾದಯಾತ್ರೆಯು ಎರಡು ದಿನಗಳ ಕಾಲ ನಡೆಯಲಿದ್ದು, ಜೂನ್ 17 ಮತ್ತು 18ರಂದು ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಹೈ ಕಮಾಂಡ್‌ನ ಗಮನ ಸೆಳೆದು ಜಿ.ಎಸ್. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂಬುದು ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, ಗದಗ ಜಿಲ್ಲೆಯ ಅಭಿವೃದ್ಧಿಗೆ ಜಿ.ಎಸ್. ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ಜನಪರ ಕಾಳಜಿ ಹಾಗೂ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಹೇಳಿದರು.
ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸಿದ್ಧಗಂಗಾ ಮಠದ ಶಿವಕುಮಾರ್ ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭವಾಗಲಿದೆ.
ಪಾದಯಾತ್ರೆಯು ಫ್ರೀಡಂ ಪಾರ್ಕ್ ನಲ್ಲಿ ಸಮಾರೋಪಗೊಳ್ಳಲಿದ್ದು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸೇರಿದಂತೆ ಕಾಂಗ್ರೆಸ್ ಹೈ ಕಮಾಂಡ್ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದ ಆಶಯಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
“ಗದಗ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವುದು ಜನರ ಆಶಯವಾಗಿದೆ. ಈ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಗಮನಕ್ಕೆ ತರಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.”
ಯಲ್ಲಪ್ಪ ಎಚ್. ಬಾಬರಿ
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷರು



